ಹಾಸನ : ಬೀದಿ ಬದಿ ವ್ಯಾಪಾರಿಗಳಿಗೆ ಜೆಡಿಎಸ್ ಕಾರ್ಯಕರ್ತನಿಂದ ಬೆದರಿಕೆ

ವಿಡಿಯೋ ಮಾಡಿರುವ ವ್ಯಕ್ತಿ ಪ್ರಮೋದ್
ಸಕಲೇಶಪುರ, ಜ. 23: ತಾಲ್ಲೂಕಿನ ಹೆತ್ತೂರು ಗ್ರಾಮದ ವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ವ್ಯಕ್ತಿಯೊಬ್ಬ “ನೀವು ಯಾರು? ಎಲ್ಲಿಂದ ಬಂದಿದ್ದೀರಿ? ನಿಮ್ಮ ಆಧಾರ್ ಕಾರ್ಡ್ ತೋರಿಸಿ” ಎಂದು ಪ್ರಶ್ನಿಸಿ ಅವರ ಬಗ್ಗೆ ಪ್ರಚೋದನಕಾರಿ ಹೇಳಿಕೆ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಮಾಡಿರುವ ವ್ಯಕ್ತಿಯನ್ನು ತಾಲೂಕಿನ ಕರಗೂರು ಗ್ರಾಮದ ನಿವಾಸಿ ಪ್ರಮೋದ್ ಎಂದು ಗುರುತಿಸಲಾಗಿದೆ. ಅತ ಜನತಾ ದಳ (ಜೆಡಿಎಸ್) ಪಕ್ಷದ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಈತ ಯೂಟ್ಯೂಬ್ ಚಾನೆಲ್ ಒಂದನ್ನು ಸಹ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಕೊಲೆ ಆರೋಪಿ ಪುನೀತ್ ಕೆರೆ ಹಳ್ಳಿ ಬೆಂಗಳೂರಿನಲ್ಲಿ ಮಾಡುತ್ತಿರುವ ಶೈಲಿಯ ಗೂಂಡಾಗಿರಿಯನ್ನೇ ಈ ಪ್ರಮೋದ್ ಹಾಸನ ದ ಹೆತ್ತೂರಿನಲ್ಲಿ ಮಾಡಿದ್ದಾನೆ.
ಗುರುವಾರ ನಡೆಯುವ ಹೆತ್ತೂರು ಗ್ರಾಮದ ವಾರದ ಸಂತೆಗೆ ತೆರಳಿದ್ದ ಪ್ರಮೋದ್, ತನ್ನ ಮೊಬೈಲ್ ಫೋನ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಕಬ್ಬಿನ ಹಾಲು ಅರೆದು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಾವು ಶನಿವಾರ ಸಂತೆ ಗ್ರಾಮದ ವ್ಯಕ್ತಿಯೆಂದು ಸ್ಪಷ್ಟಪಡಿಸಿದರೂ, “ನೀನು ಬಾಂಗ್ಲಾದೇಶದವನು” ಎಂದು ಪ್ರಮೋದ್ ಆರೋಪಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದಲ್ಲದೆ, ಸಂತೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದ ಮಹಿಳೆಯರನ್ನೂ ಉದ್ದೇಶಿಸಿ “ನಿಮ್ಮ ಆಧಾರ್ ಕಾರ್ಡ್ ತೋರಿಸಿ” ಎಂದು ಒತ್ತಾಯಿಸಿರುವ, ತೋರಿಸದಿದ್ದಾಗ ಅವ್ಯಾಚ ಶಬ್ದಗಳಿಂದ ನಿಂದಿಸುವ ದೃಶ್ಯಗಳು ವಿಡಿಯೋದಲ್ಲಿ ಕಾಣುತ್ತವೆ.
ಸಂತೆಗೆ ಖರೀದಿಗೆ ಬಂದ ಕೆಲವರು ತಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದು ತಿಳಿಸಿದಾಗ, “ನೀವು ಬಾಂಗ್ಲಾದೇಶದವರು, ಇಲ್ಲಿಗೆ ನುಸುಳಿದ್ದೀರಿ” ಎಂದು ಈ ಪ್ರಮೋದ್ ಆರೋಪಿಸಿರುವುದು ಕಂಡುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ವಿಷಯ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದೆ. ಬಳಿಕ ಶಾಂತಿ ಕಾಪಾಡುವ ಉದ್ದೇಶದಿಂದ ವಿಡಿಯೋ ಡಿಲೀಟ್ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ಪ್ರಮೋದ್ ವಿಡಿಯೋ ಡಿಲೀಟ್ ಆಗಿದೆ.
ಈ ಕುರಿತು ವರದಿಗಾರರು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಶ್ನಿಸಿದಾಗ, “ಬಾಂಗ್ಲಾದೇಶೀಯರು ಭಾರತದೊಳಗೆ ಅಕ್ರಮವಾಗಿ ನುಸುಳುತ್ತಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ, ದೇಶದ ಭದ್ರತೆಯ ದೃಷ್ಟಿಯಿಂದ ನಾನು ಈ ರೀತಿಯ ಪ್ರಶ್ನೆ ಮಾಡಿದ್ದೇನೆ. ನನ್ನ ಉದ್ದೇಶ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯವನ್ನು ದ್ವೇಷಿಸುವುದಲ್ಲ” ಎಂದು ಪ್ರಮೋದ್ ಸಮಜಾಯಿಷಿ ನೀಡಿದ್ದಾನೆ.
“ಬಾಂಗ್ಲಾದೇಶೀಯರು ಸಕಲೇಶಪುರದಲ್ಲಿ ಅಕ್ರಮವಾಗಿ ನೆಲೆಸಲು ರಾಜಕೀಯ ಪಕ್ಷಗಳೂ ಕಾರಣ. ಇದಕ್ಕೆ ಬಿಜೆಪಿ ಪಕ್ಷ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಆಡಳಿತ ವ್ಯವಸ್ಥೆಯ ವೈಫಲ್ಯವೂ ಹೊಣೆ. ಇದು ರಾಜಕೀಯ ವಿಚಾರವಲ್ಲ, ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯ” ಎಂದು ಆತ ಆರೋಪಿಸಿದ್ದಾನೆ.
“ದೇಶದ ಇತರೆ ರಾಜ್ಯಗಳಿಂದ ಬಂದವರು ಇಲ್ಲಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ವಿದೇಶಿ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸುವುದು ಸರಿಯಲ್ಲ. ಹೆತ್ತೂರು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಅಕ್ರಮ ವಲಸಿಗರು ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಶನಿವಾರ ಸಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಪ್ರಮೋದ್ ತಿಳಿಸಿದ್ದಾನೆ.
ತಾನು ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದು, ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ನನ್ನದೇ ಯೂಟ್ಯೂಬ್ ಚಾನೆಲ್ ಇದೆ. ದೇಶ ಮೊದಲು, ಪಕ್ಷ ನಂತರ” ಎಂಬುದೇ ತನ್ನ ನಿಲುವು ಎಂದು ಆತ ಹೇಳಿದ್ದಾನೆ.
ಈ ಪ್ರಕರಣ ತಾಲೂಕಿನಲ್ಲಿ ಶಾಂತಿ, ಕದಡುವಂತಹ ವಿಚಾರವಾಗಿದ್ದು ಈ ರೀತಿಯಾಗಿ ಜನರನ್ನು ಪ್ರಚೋದಿಸುವ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಜೆಡಿಎಸ್ ವಕ್ತಾರ, ಸ ಬ ಭಾಸ್ಕರ್ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಆಗಲಿ ನಮ್ಮ ಪಕ್ಷದ ಮುಖಂಡರಿಗಾಗಲಿ ಸ್ಪಷ್ಟ ಮಾಹಿತಿ ಇಲ್ಲ. ಶನಿವಾರ ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಜೆಡಿಎಸ್ ಸಮಾವೇಶದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಇಂತಹ ವರ್ತನೆ ನಾವು ಸಮ್ಮತಿಸುವುದಿಲ್ಲ. ವಿದೇಶಿಯರnnu ಪತ್ತೆಹಚ್ಚುವುದು ಪೊಲೀಸರಿಗೆ ಬಿಟ್ಟ ವಿಚಾರ ಎಂದು ಹೇಳಿದರು.







