ಹಲ್ಮಿಡಿ ಶಾಸನದಿಂದ ಬೂಕರ್‌ವರೆಗೆ ಹಾಸನದ ಕೊಡುಗೆ: ಬರಗೂರು
ಬಾನು ಮುಷ್ತಾಕ್, ದೀಪಾ ಭಾಸ್ತಿಗೆ ಸನ್ಮಾನ

ಹಾಸನ : ಕನ್ನಡದ ಪ್ರಥಮ ಶಾಸನ ಹಲ್ಮಿಡಿಯಿಂದ ಇಂದು ಬೂಕರ್ ಪ್ರಶಸ್ತಿವರೆಗೂ ಕೊಡುಗೆ ನೀಡಿರುವ ವಿಶಿಷ್ಟ ಸಾಂಸ್ಕೃತಿಕ ಜಿಲ್ಲೆಯಾಗಿದೆ ಹಾಸನ. ಇಂದು ನಾನು ತುಂಬಾ ಸಂತೋಷದಿಂದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸಂಸ್ಕೃತಿ ಚಿಂತಕ, ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬಾನು ಮುಷ್ತಾಕ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1973ರಲ್ಲಿ ಬಂಡಾಯ ಸಾಹಿತ್ಯ ಕಟ್ಟಿದಾಗ ಅದೇ ಸಾಹಿತ್ಯದಲ್ಲಿ ಬಾನು ಮುಷ್ತಾಕ್ ಬೆಳೆದಿದ್ದಾರೆ. ಅದನ್ನು ಅವರು ಈಗಲೂ ಸ್ಮರಿಸುತ್ತಿದ್ದಾರೆ ಎಂದರು.
ಇಲ್ಲಿ ಇಬ್ಬರೂ ಲೇಖಕಿಯರು ಮುಖ್ಯ. ಮೂಲ ಲೇಖಕರು ಬಹುಮುಖ್ಯ. ಎದೆಯ ಹಣತೆ ಕೃತಿ ಕನ್ನಡಕ್ಕೆ ಹೊಸ ಆಯಾಮ ಒದಗಿಸಿಕೊಟ್ಟಿದ್ದು ಬಹಳ ವಿಶೇಷ. ಇದನ್ನು ಭಾಸ್ತಿ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇಬ್ಬರನ್ನು ಅಭಿನಂದಿಸಲು ಉದ್ದೇಶಿಸಿದ್ದು ಜನಪರ ಮಾದರಿಯಾಗಿದೆ. ಬಾನು ಅವರು ಬದುಕಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅನುಭವ ದ್ರವ್ಯವನ್ನು ಕೊಟ್ಟಿದ್ದಾರೆ. ಅದೇ ಕನ್ನಡದ ಸೊಗಡನ್ನು ದೀಪಾ ಭಾಸ್ತಿಯವರು ಮೂಲ ಲೇಖಕಿಯ ಆಶಯ ಅರಿತು ಭಾಷಾಂತರ ಅಷ್ಟೇ ಅಲ್ಲದೇ ಭಾವಾಂತರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಹಿರಿಯ ಸಾಹಿತಿ ಎಚ್.ಎಸ್. ಅನುಪಮಾ ಮಾತನಾಡಿ, ಕಳೆದ ವರ್ಷ ಜಿಲ್ಲೆಗೆ ಕವಿದಿದ್ದ ಕರಾಳ ಕತ್ತಲಿಗೆ ಬಾನು ಮುಷ್ತಾಕ್ ಅವರು ಹಚ್ಚಿದ ಎದೆಯ ಹಣತೆಯಿಂದ ಕತ್ತಲು ಕರಗಿ ಜಿಲ್ಲೆ ಪ್ರಕಾಶಿಸುತ್ತಿದೆ. ಬಾನು ಮುಷ್ತಾಕ್ ನಿರ್ವಾತದಿಂದ ಬಂದವರಲ್ಲ. ಕುಟುಂಬ, ಸಮುದಾಯ, ಒತ್ತಡ, ದುಗುಡು, ಚಳವಳಿ, ಪ್ರಕೃತಿಯಿಂದ ಬಂದವರು. ಇಂದು ಅಕ್ಷರಕ್ಕೆ ಸಿಕ್ಕ ಬಹುದೊಡ್ಡ ಗೌರವವನ್ನು ಸಂಭ್ರಮಿಸುವ ಸುವರ್ಣ ಕ್ಷಣ ನಮ್ಮದಾಗಿದೆ. ಒಳ್ಳೆಯ ಎಲ್ಲವನ್ನೂ ಸ್ವೀಕರಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕು ಎಂಬುದನ್ನು ಉಪನಿಷತ್‌ಗಳು ಹೇಳಿವೆ. ಬೂಕರ್ ಪ್ರಶಸ್ತಿಯ ಆಶಯ ಮತ್ತು ಸಂಕೇತ ಕೂಡ ಅದೆ ಎಂದು ಹೇಳಿದರು.
ಸಂಸದ ಶ್ರೇಯಸ್ ಎಂ. ಪಟೇಲ್, ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಜಿಲ್ಲಾಧಿಕಾರಿ ಸತ್ಯಭಾಮ, ಮಹಾನಗರ ಪಾಲಿಕೆಯ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜೀತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ತೌಫೀಕ್ ಅಹ್ಮದ್, ನಾರಾಯಣದಾಸ್, ಧರ್ಮೇಶ್, ರಾಜು ಗೊರೂರು, ಎಂ.ಜಿ. ಪೃಥ್ವಿ, ರಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ವಿಜಯಕುಮಾರ್, ಎಚ್.ಕೆ. ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.
ಬೂಕರ್ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್ ಅವರನ್ನು ಸನ್ಮಾನಿಸಲು ವಿವಿಧ ಸಂಘ ಸಂಸ್ಥೆಯ ನಾಗರಿಕರು ಮುಗಿ ಬಿದ್ದರು. ಎದೆಯ ಹಣತೆ ಪುಸ್ತಕವನ್ನು ಖರೀದಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕಲಾಭವನದ ಹೊರಭಾಗದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು.
ನನ್ನ ಬರಹ ನಿಮ್ಮ ಮನಸನ್ನು ಕದಡಿದ್ದರೇ ನನ್ನ ಉದ್ದೇಶ ಸಫಲವಾಯಿತು ಎಂದರ್ಥ. ಬೂಕರ್ ಪ್ರಶಸ್ತಿಯ ಶ್ರೇಯಸ್ಸು ನಿಮಗೆ ಸಿಗಬೇಕು. ನಮ್ಮ ಮನಸ್ಸುಗಳನ್ನು ಮತ್ತೆ ಗಟ್ಟಿಗೊಳಿಸಿ ಸೌಹಾರ್ದವಾಗಿ ಬಾಳುವ.
-ಬಾನು ಮುಷ್ತಾಕ್, ಬೂಕರ್ ಪ್ರಶಸ್ತಿ ವಿಜೇತೆ