75 ಲಕ್ಷ ರೂ. ಪಡೆದಿರುವುದು ಸಾಬೀತುಪಡಿಸಿ, ಇಲ್ಲದಿದ್ದರೆ ಸುಮ್ಮನಿರಲ್ಲ : ಎಚ್ಡಿಕೆಗೆ ಸಚಿವ ಶಿವಲಿಂಗೇಗೌಡ ಸವಾಲು
"ಡಿಸಿ ವರ್ಗಾವಣೆಯಲ್ಲಿ ಹಣ ಪಡೆದಿದ್ದರೆ ಹಾಸನಾಂಬೆ ತಾಯಿ ನೋಡಿಕೊಳ್ಳಲಿ"

ಎಚ್.ಡಿ.ಕುಮಾರಸ್ವಾಮಿ : ಕೆ.ಎಂ.ಶಿವಲಿಂಗೇಗೌಡ
ಹಾಸನ : ಜಿಲ್ಲಾಧಿಕಾರಿ ವರ್ಗಾವಣೆ ಹಾಗೂ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳು ಜಿಲ್ಲಾ ರಾಜಕೀಯದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿವೆ. ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ತಮ್ಮ ವಿರುದ್ಧದ 75 ಲಕ್ಷ ರೂ. ಹಣ ಪಡೆದಿರುವ ಆರೋಪವನ್ನು ಸಾಬೀತುಪಡಿಸುವಂತೆ ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನಗರದ ಹಾಸನಾಂಬ ದೇವಾಲಯದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಇಬ್ಬರ ನಡುವಿನ ಸಂಭಾಷಣೆಯ ಚಾಟ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಅವರ ಹೆಸರು ಪ್ರಸ್ತಾಪಿಸಿದ್ದು, ಇತರ ವ್ಯಕ್ತಿಗಳ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ರಾತ್ರಿ ಚಾಟ್ ತಂದುಕೊಟ್ಟರು ಎಂಬ ಆರೋಪವನ್ನೂ ಮಾಡಿದ್ದಾರೆ. ಆದರೆ ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕಾಲದಲ್ಲಿ ಯಾರ ಹೆಸರಿನಲ್ಲಾದರೂ ಇಂತಹ ಸಂಭಾಷಣೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ದಾಖಲೆ ಬಿಡುಗಡೆ ಮಾಡುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ ಎಂದರು.
ಕೇಂದ್ರ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಧಾರರಹಿತ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದು ಸರಿಯಲ್ಲ. ಈ ಮಾಹಿತಿ ನಿಮಗೆ ಯಾರು ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ಆರೋಪದ ಸತ್ಯಾಸತ್ಯತೆ ಪರಿಶೀಲಿಸಿ ಮಾತನಾಡಬೇಕಿತ್ತು. ಮುಂದೆ ಈ ಆರೋಪಗಳು ಸುಳ್ಳು ಎಂದು ಸಾಬೀತಾದರೆ ನಿಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸುಮಾರು 20 ವರ್ಷ ರಾಜಕೀಯವಾಗಿ ಒಟ್ಟಿಗೆ ಇದ್ದುದನ್ನು ಸ್ಮರಿಸಿದ ಶಿವಲಿಂಗೇಗೌಡ, ನಾನು ನಿಮ್ಮೊಂದಿಗಿದ್ದಾಗ ನಿಮಗೆ ಅಗೌರವ ತರುವಂತಹ ಯಾವುದೇ ಕೆಲಸ ಮಾಡಿಲ್ಲ. ಈಗ ಸಚಿವನಾಗಿದ್ದೇನೆ ಎಂಬ ಕಾರಣಕ್ಕೆ ಹೊಟ್ಟೆಕಿಚ್ಚಿನಿಂದ ಇಂತಹ ಆರೋಪ ಮಾಡುತ್ತಿದ್ದೀರಾ ಎಂಬ ನೋವು ಕಾಡುತ್ತಿದೆ. ಹಾಸನಾಂಬೆ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ನಮ್ಮಂತಹ ಬಡವರ ಮಕ್ಕಳ ಮೇಲೆ ಇಂತಹ ಆರೋಪಗಳನ್ನು ಏಕೆ ಮಾಡುತ್ತಿದ್ದೀರಿ? ನಾವು ನಿಮಗೆ ಯಾವ ತೊಂದರೆಯನ್ನೂ ಕೊಟ್ಟಿಲ್ಲ ಎಂದು ಭಾವುಕರಾಗಿ ಹೇಳಿದರು.
ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಅಂಡ್ ರನ್ ರಾಜಕಾರಣವಾಗಿದೆ. ವಿಧಾನಸಭೆಯಲ್ಲಿ ಎರಡು ಬಾರಿ ಪೆನ್ಡ್ರೈವ್ ತೋರಿಸಿದ್ದನ್ನು ನೋಡಿದ್ದೇನೆ. ಆದರೆ ಅದರಲ್ಲಿರುವ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದ್ದೀರಾ? ಈಗಲೂ ಆರೋಪಗಳನ್ನು ಮಾಡುತ್ತೀರಿ, ಆದರೆ ಅವುಗಳ ಸತ್ಯಾಸತ್ಯತೆ ಕುರಿತು ಸ್ಪಷ್ಟನೆ ನೀಡುವುದಿಲ್ಲ. ಮಾನಹಾನಿ ಮಾಡುವಂತಹ ಪ್ರವೃತ್ತಿಯನ್ನು ಬಿಡಬೇಕು ಎಂದು ತೀಕ್ಷ್ಣವಾಗಿ ಹೇಳಿದರು.
ಚಾಟ್ನಲ್ಲಿ ಹೆಸರು ಪ್ರಸ್ತಾಪವಾಗಿರುವ ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ಫೋನ್ನ್ನು ಪೊಲೀಸರಿಗೆ ಒಪ್ಪಿಸಿ, ಯಾವುದೇ ತನಿಖೆಗೂ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಹೀಗಿರುವಾಗ ತನಿಖೆ ಪೂರ್ಣಗೊಳ್ಳುವ ಮೊದಲೇ ಆರೋಪಗಳನ್ನು ಸತ್ಯವೆಂಬಂತೆ ಬಿಂಬಿಸುವುದು ಸರಿಯಲ್ಲ. ತನಿಖೆಯಿಂದ ನಿಜಾಂಶ ಹೊರಬರಲಿ ಎಂದರು.
ದೇವಿಯ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಸಿದ್ಧ :
ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ನಾನು ಒಂದೇ ಒಂದು ರೂಪಾಯಿ ಪಡೆದಿದ್ದರೂ ಹಾಸನಾಂಬೆ ತಾಯಿ ನನ್ನನ್ನು ನೋಡಿಕೊಳ್ಳಲಿ. ಹಣ ಪಡೆದಿಲ್ಲ ಎಂಬುದು ಸತ್ಯ. ಆರೋಪ ಮಾಡುವವರು ಕೂಡ ದೇವಿಯ ಮುಂದೆ ನಿಂತು ತಮ್ಮ ಆರೋಪ ಸತ್ಯವೆಂದು ಪ್ರಮಾಣ ಮಾಡಲಿ. ಸತ್ಯ ಯಾವುದು ಎಂಬುದನ್ನು ಆ ತಾಯಿಯೇ ನಿರ್ಧರಿಸಲಿ ಎಂದು ಸವಾಲು ಹಾಕಿದರು.
ನನ್ನ ವಿರುದ್ಧ 75 ಲಕ್ಷ ಪಡೆದಿರುವ ಆರೋಪ ಮಾಡಿದ್ದೀರಿ. ಅದನ್ನು ದಾಖಲೆ ಸಮೇತ ಸಾಬೀತುಪಡಿಸಬೇಕು. ಸಾಬೀತುಪಡಿಸದೇ ಹೋದರೆ ನಾನು ಸುಮ್ಮನೆ ಕೂರುವುದಿಲ್ಲ. ಈ ಆರೋಪಗಳಿಗೆ ಕೊನೆ ಎಂಬುದು ಬೇಡವೇ? ಎಲ್ಲಿಯವರೆಗೆ ಹಿಟ್ ಅಂಡ್ ರನ್ ರಾಜಕಾರಣ ಮಾಡುತ್ತೀರಿ? ನಿಮಗೆ ಮಾಹಿತಿ ನೀಡಿದ ವ್ಯಕ್ತಿಯನ್ನು ಎದುರಿಗೆ ಕರೆತನ್ನಿ. ಅವರ ಸಮ್ಮುಖದಲ್ಲೇ ಎಲ್ಲ ವಿಚಾರಗಳನ್ನು ಚರ್ಚಿಸೋಣ ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ನಾಲ್ಕು ತಿಂಗಳಾಗುವಷ್ಟರಲ್ಲಿ ಇಂತಹ ಆರೋಪಗಳನ್ನು ಎದುರಿಸಬೇಕಾಗಿದೆ. ಈ ಬೆಳವಣಿಗೆಯಿಂದ ವೈಯಕ್ತಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ನೋವಾಗಿದೆ. ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕಿತ್ತು. ಕುಮಾರಣ್ಣ, ನೀವು ಮಾಡಿರುವುದು ಒಳ್ಳೆಯ ಕೆಲಸವಲ್ಲ ಎಂದು ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಇತರರು ಉಪಸ್ಥಿತರಿದ್ದರು.






