ರೇವಣ್ಣ ಕುಟುಂಬವನ್ನು ಮುಗಿಸಲು ನಡೆದ ಎಲ್ಲಾ ಕುತಂತ್ರಗಳನ್ನು ರಾಜ್ಯದ ಜನರು ನೋಡಿದ್ದಾರೆ: ಎಚ್.ಡಿ. ದೇವೇಗೌಡ

ಹಾಸನ: ʼಜೆಡಿಎಸ್ ಮುಗಿದಿದೆʼ ಎನ್ನುವವರಿಗೆ ಇಲ್ಲಿ ಸೇರಿರುವ ಜನಸ್ತೋಮವೇ ತಕ್ಕ ಉತ್ತರ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಇದೇ ನಮ್ಮ ಉತ್ತರ. ಇದೇ ನಮ್ಮ ಸಂದೇಶ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ನಗರದ ಬೂವನಹಳ್ಳಿ ಸಮೀಪ ನಡೆದ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಬೃಹತ್ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ರೇವಣ್ಣ ಕುಟುಂಬವನ್ನು ಮುಗಿಸಲು ನಡೆದ ಎಲ್ಲಾ ಕುತಂತ್ರಗಳನ್ನು ರಾಜ್ಯದ ಜನರು ನೋಡಿದ್ದಾರೆ. ಎಸ್‌ಐಟಿ ತನಿಖೆ, ಬಂಧನಗಳು ಮತ್ತು ಇದೀಗ ಅದೇ ಅಧಿಕಾರಿಗಳಿಗೆ ಬಹುಮಾನ ಇವೆಲ್ಲವೂ ಆತ್ಮವಿಮರ್ಶೆಗೆ ಒಳಪಡಬೇಕು ಎಂದು ಹೇಳಿದರು.
ಒಬ್ಬ ರೈತನ ಮಗನಿಗೆ ದೇಶ ಆಳುವ ಅವಕಾಶ ಕೊಟ್ಟ ಜನರು ಜೆಡಿಎಸ್ ಜೊತೆ ಇಂದಿಗೂ ನಿಂತಿದ್ದಾರೆ. ಇಂದಿನ ಸಮಾವೇಶವೇ ನಮ್ಮ ಉತ್ತರ ಎಂದರು.
ಇಂದು ದೇಶದಲ್ಲಿ ಕಾಂಗ್ರೆಸ್ ಯಾವ ಸ್ಥಿತಿಯಲ್ಲಿದೆ ಎಂಬುದು ಜನರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ ದೇವೇಗೌಡ ಅವರು, ತಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲ ಎಂದು ಹೇಳಿದರು. ಮಹಿಳಾ ಮೀಸಲಾತಿ, ನೀರಾವರಿ ಯೋಜನೆಗಳು ತಮ್ಮ ಆಡಳಿತದ ಹೆಮ್ಮೆಯ ನಿರ್ಧಾರಗಳು ಎಂದರು.
ಜೆಡಿಎಸ್ ಎಲ್ಲಿದೆ ಎಂದವರಿಗೆ ಇದೇ ಉತ್ತರ: ಎಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ಎಲ್ಲಿದೆ ಎಂದು ಕೇಳುವವರಿಗೆ ಇಂದಿನ ಜನಸ್ತೋಮವೇ ಉತ್ತರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಸರ್ಕಾರವನ್ನು ʼಭ್ರಷ್ಟ ಮತ್ತು ಲೂಟಿಕೋರ ಸರ್ಕಾರʼ ಎಂದು ಟೀಕಿಸಿದರು.
ನಮ್ಮ ತಪ್ಪಿನಿಂದ ಗೆದ್ದ ಸಂಸದರೊಬ್ಬರು ನಮ್ಮ ಬಗ್ಗೆ ಟೀಕಿಸಿ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ಹಿಂದೆ ದೇವೇಗೌಡರನ್ನು ಪುಟ್ಟಸ್ವಾಮಿಗೌಡ ಹೊಳೆನರಸೀಪುರದಲ್ಲಿ ಸೋಲಿಸಿದ್ದನ್ನು ನೆನಪಿಸಿಕೊಂಡು ಅದೊಂದು ಕಾವೇರಿ ತೀರದ ಜನರಿಗೆ ಆದ ಸೋಲು ಎಂದು ಬಣ್ಣಿಸಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜೆಡಿಎಸ್ ಕಾರ್ಯಕರ್ತರನ್ನು ಭಯಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಘಟನೆ ನಮ್ಮ ಬಲ. ಹಳ್ಳಿಹಳ್ಳಿಗಳಲ್ಲೂ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುತ್ತದೆ” ಎಂದರು.
ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳು ನಡೆಯಲಿವೆ ಎಂದು ಅವರು ಘೋಷಿಸಿದರು.
ವಿಧಾನಸಭಾ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ಯುವಕರು ಜೆಡಿಎಸ್ ಕಡೆಗೆ ಮತ್ತೆ ನೋಡುತ್ತಿದ್ದಾರೆ. ಅಭಿವೃದ್ಧಿ ರಾಜಕಾರಣವೇ ನಮ್ಮ ಗುರಿ ಎಂದು ಹೇಳಿದರು.
ತಪ್ಪು ಮಾಡಿದವರು ಯಾರೇ ಆಗಿರಲಿ ಕಾನೂನಿನ ಮುಂದೆ ಉತ್ತರಿಸಬೇಕು, ಆದರೆ ರಾಜಕೀಯ ದ್ವೇಷಕ್ಕಾಗಿ ಕುಟುಂಬವನ್ನೇ ಗುರಿಯಾಗಿಸುವುದು ತಪ್ಪು ಎಂದರು.
ಸಮಾವೇಶದಲ್ಲಿ ಅರಕಲಗೂಡು ಶಾಸಕ ಎ.ಮಂಜು, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಹಲವು ನಾಯಕರು ಮಾತನಾಡಿದರು,
ಈ ಸಂದರ್ಭದಲ್ಲಿ ಶಾಸಕರಾದ ಶಾರದಾ ಪುರಿ ನಾಯಕ್, ಕರಿಯಮ್ಮ ಹರೀಶ್ ಗೌಡ, ಮಾಜಿ ಸಂಸದ ಮಲ್ಲೇಶ್ ಬಾಬು, ಎಚ್.ಟಿ.ಮಂಜು, ಮಾಜಿ ಸಚಿವ ರಾದ ಡಿ.ಸಿ.ತಮ್ಮಣ್ಣ, ಸಾರಾ ಮಹೇಶ್, ಕೃಷ್ಣಪ್ಪ, ವೈ. ಎಸ್.ವಿ.ದತ್ತ, ಬೋಜೇಗೌಡ, ಸುರೇಶ್ ಗೌಡ, ರಮೇಶ್ ಗೌಡ, ಎಚ್.ಕೆ.ಕುಮಾರಸ್ವಾಮಿ, ಪುಟ್ಟರಾಜು, ಶಿವಶಂಕರ್ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಇದ್ದರು.
ಸಹಸ್ರಾರು ಜನರು ಭಾಗಿ
ಜೆಡಿಎಸ್ ಜನತಾ ಸಮಾವೇಶಕ್ಕೆ ಸಾರಿಗೆ ಬಸ್‌ಗಳು, ಖಾಸಗಿ ವಾಹನಗಳ ಮೂಲಕ ಕಾರ್ಯಕರ್ತರು ಆಗಮಿಸಿದ್ದರು. ನೂಕುನುಗ್ಗಲು ನಿಯಂತ್ರಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.







