ಸಚಿವರಾಗಿ ಕೆ.ಎಂ.ಶಿವಲಿಂಗೇಗೌಡ ಪ್ರಮಾಣವಚನ ಸ್ವೀಕಾರ

ಹಾಸನ : ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಸೋಮವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಅವರಿಗೆ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಕೆ.ಎಂ.ಶಿವಲಿಂಗೇಗೌಡ ಅವರ ಕಿರು ಪರಿಚಯ :
ಕೆ.ಎಂ.ಶಿವಲಿಂಗೇಗೌಡ ಅವರು 1958ರ ಫೆಬ್ರವರಿ 14ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದಲ್ಲಿ ಮಂಜೇಗೌಡ ಹಾಗೂ ದ್ಯಾವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ವಿದ್ಯಾರ್ಥಿ ಜೀವನದಲ್ಲಿಯೇ ಹಾಸನ ಸರಕಾರಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ ಅವರು, ರಾಜಕೀಯ ಹಾಗೂ ಸಾರ್ವಜನಿಕ ಜೀವನದತ್ತ ಮೊದಲ ಹೆಜ್ಜೆ ಇಟ್ಟರು. ಕೃಷಿಯನ್ನೇ ತಮ್ಮ ಮೂಲ ವೃತ್ತಿಯನ್ನಾಗಿ ಮಾಡಿಕೊಂಡಿರುವ ಅವರು, ಇಂದಿಗೂ ರೈತರ ಬದುಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸಹಕಾರ ಕ್ಷೇತ್ರದ ಮೂಲಕ ಗುರುತಿಸಿಕೊಂಡ ಶಿವಲಿಂಗೇಗೌಡ ಅವರು, ಗಂಡಸಿ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಬಳಿಕ 2001ರಿಂದ 2006ರವರೆಗೆ ಹಾಸನ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜನಸೇವೆ ಸಲ್ಲಿಸಿದರು.
2004ರ ಗಂಡಸಿ ವಿಧಾನಸಭಾ ಚುನಾವಣೆಯು ಅವರ ರಾಜಕೀಯ ಜೀವನದ ಮೊದಲ ದೊಡ್ಡ ಪರೀಕ್ಷೆಯಾಗಿತ್ತು. ಜನತಾ ದಳ (ಜಾತ್ಯತೀತ) ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಕೇವಲ 18 ಮತಗಳ ಅಂತರದಲ್ಲಿ ಸೋಲು ಕಂಡರು.
2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ 74,025 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ 76,579 ಮತಗಳನ್ನು ಪಡೆದು ಸತತ ಎರಡನೇ ಬಾರಿ ಜಯಗಳಿಸಿದ ಅವರು, 2018ರಲ್ಲಿ 93,986 ಮತಗಳನ್ನು ಗಳಿಸಿ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದರು.
2022ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ 2023ರ ಚುನಾವಣೆಯಲ್ಲೂ ಗೆದ್ದು ನಾಲ್ಕನೇ ಬಾರಿ ಶಾಸಕರಾಗಿ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ ಹೆಚ್. ಡಿ. ಪುಷ್ಪವತಿ ಗೃಹಿಣಿಯಾಗಿದ್ದು, ಕುಟುಂಬದಲ್ಲಿ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.






