ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್) ಹಾಸನ ಘಟಕ ಉದ್ಘಾಟನೆ

ಹಾಸನ: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ನೂತನ ಮೀಫ್ ಹಾಸನ ಘಟಕವು ಬುಧವಾರ ಉದ್ಘಾಟನೆಗೊಂಡಿತು.
ನೂತನ ಘಟಕವನ್ನು ಉದ್ಘಾಟಿಸಿದ ಮೀಫ್ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಉಮರ್ ಟೀಕೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಅಭಿವೃದ್ಧಿಗೆ ಶೈಕ್ಷಣಿಕ ಪ್ರಗತಿಯು ಅತ್ಯವಶ್ಯಕ ಎಂದು ಹೇಳಿ ಶುಭ ಹಾರೈಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋಮು ಸೌಹಾರ್ದ ಕಾಪಾಡುವಲ್ಲಿ ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸಂಸ್ಥೆ ಗಳ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ಹೇಳಿದರು.
ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು ಮೀಫ್ ಹಮ್ಮಿಕೊಂಡಿರುವ ವಿವಿಧ ಯೋಜನೆಗಳನ್ನು ಹಾಗೂ ಉನ್ನತ ವಿಧ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಫ್ ನೀಡುತ್ತಿರುವ ಪ್ರೋತ್ಸಾಹವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಯ್ಯದ್ ಅಹ್ಮದ್ ಶಾ ಹುಸೇನಿ, ನಿವೃತ್ತ ಉಪ ಆಯುಕ್ತ (ಅಬಕಾರಿ) ನೂರ್ ಮುಹಮ್ಮದ್ ಹುಸೇನ್, ಮೀಫ್ ಹಾಸನ ಘಟಕದ ಗೌರವಾಧ್ಯಕ್ಷ ಸಯ್ಯದ್ ತಾಜ್, ಸಲಹೆಗಾರ ಹಾಸನ ಜನಪ್ರಿಯ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್, ಮೀಫ್ ಹಾಸನ ನೂತನ ಘಟಕದ ಅಧ್ಯಕ್ಷ ಮುಹಮ್ಮದ್ ಅಲಿ ಮತ್ತು ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಉಪಸ್ಥಿತರಿದ್ದರು.
ಹಾಸನ ಘಟಕದ ಸಲಹೆಗಾರ ಸಯ್ಯದ್ ಸಜ್ಜಾದ್ ಪಾಷಾ ಸ್ವಾಗತಿಸಿದರು. ಮೀಫ್ ಕಾರ್ಯದರ್ಶಿ ಬಿ.ಎ. ಕ್ಬಾಲ್ ವಂದಿಸಿದರು.
ಮೀಫ್ ಜಿಲ್ಲಾ ಸಂಚಾಲಕ ಹೈದರ್ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.
ಹಾಸನ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾ ಸಂಸ್ಥೆಗಳ 120ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನೂತನ ಹಾಸನ ಘಟಕ ಕಾರ್ಯಾರಂಭದೊಂದಿಗೆ ಮೀಫ್ ತನ್ನ ಕಾರ್ಯ ವ್ಯಾಪ್ತಿಯನ್ನು ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ಆರು ಜಿಲ್ಲೆಗಳಿಗೆ ವಿಸ್ತರಿಸಿದಂತಾಗಿದೆ.







