ಪತ್ರಕರ್ತನಿಗೆ ಬೆದರಿಕೆ ಆರೋಪ | ಬೇಲೂರಿನ ಇನ್‌ಸ್ಪೆಕ್ಟರ್ ರೇವಣ್ಣ ವಿರುದ್ಧ ಪತ್ರಕರ್ತರಿಂದ ಡಿವೈಎಸ್‌ಪಿಗೆ ದೂರು

ಬೇಲೂರು : 'ವಾರ್ತಾಭಾರತಿ' ಪತ್ರಿಕೆಯ ಬೇಲೂರು ತಾಲೂಕು ವರದಿಗಾರ ಅಬ್ರಾರ್ ಅವರಿಗೆ ಇನ್ ಸ್ಪೆಕ್ಟರ್ ರೇವಣ್ಣ ಅವರು ಬೆದರಿಕೆ ಹಾಕಿರುವ ಆರೋಪದಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಪತ್ರಕರ್ತರ ನಿಯೋಗ ಡಿವೈಎಸ್‌ಪಿ ಗೋಪಿ ಅವರಿಗೆ ದೂರು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಬೇಲೂರಿನ ನೆಹರೂ ನಗರದ ರಸ್ತೆಯಲ್ಲಿ ನಡೆದ ಘಟನೆಯೊಂದರ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ವೀಡಿಯೊವನ್ನು ವಾರ್ತಾಭಾರತಿಯ ಬೇಲೂರು ವರದಿಗಾರ ಅಬ್ರಾರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಜೊತೆಗೆ ಈ ಬಗ್ಗೆ ವಾರ್ತಾಭಾರತಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು. ಅದಕ್ಕೆ ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಪತ್ರಕರ್ತನಿಗೆ ಕರೆ ಮಾಡಿ ನಿನಗೆ ಬೇಕಾದ ಹಾಗೆ ಸುದ್ದಿ ಮಾಡುತ್ತಿಯಾ, ನಿನಗೆ ಆ ವಿಚಾರ ಪೂರ್ಣ ಪ್ರಮಾಣದಲ್ಲಿ ಗೊತ್ತಾ? ನೀನು ಪೊಲೀಸರಿಂದ ಮಾಹಿತಿ ಕೇಳಿ ಸುದ್ದಿ ಮಾಡಬೇಕು, ಸಾಮಾಜಿಕ ಜಾಲತಾಣಗಳಲ್ಲಿ ನೀನು ಇಲ್ಲ ಸಲ್ಲದ ಸುದ್ದಿ ಹಾಕಿದರೆ ನಿನಗೇ ನೇರವಾಗಿ ಹೇಳುತ್ತೇನೆ, ನಿನನ್ನು ಟಾರ್ಗೆಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಜಿ.ಎಂ.ರಾಜಶೇಖರ್ ನೇತೃತ್ವದ ಪತ್ರಕರ್ತರ ನಿಯೋಗದಲ್ಲಿ ಪತ್ರಕರ್ತರಾದ ಬಸವರಾಜ್, ಹುಸ್ಕೂರ್ ರಮೇಶ್, ನೂರ್ ಅಹ್ಮದ್, ಅರುಣ್ ರಾಜ್ ಪುತ್, ಸ್ವಾಮಿ, ಚೇತನ್, ವಿನೋದ್, ಮತ್ತಿತರರು ಉಪಸ್ಥಿತರಿದ್ದರು.
ಬೇಲೂರು ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣಕರೆ ಮಾಡಿ ನನಗೆ ಬೆದರಿಕೆ ಹಾಕುವುದು ಆಘಾತಕಾರಿಯಾಗಿದೆ. ನನಗೆ ಜೀವ ಭಯ ಇದೆ. ಇವರು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ನನಗೆ ಸರಕಾರ ರಕ್ಷಣೆ ನೀಡಬೇಕು. ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಮತ್ತು ಹಾಸನದ ಎಸ್‌ಪಿ ಅವರಿಗೆ ಮನವಿ ಮಾಡುತ್ತೇನೆ. ಸರಕಾರ ಪತ್ರಕರ್ತರ ರಕ್ಷಣೆಗೆ ನಿಲ್ಲಬೇಕು ಎಂದು ಪತ್ರಕರ್ತ ಅಬ್ರಾರ್ ಮನವಿ ಮಾಡಿದ್ದಾರೆ
ಬೇಲೂರು ಪೊಲೀಸ್ ಪತ್ರಕರ್ತರಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾಡುವುದು ಸರಿಯಲ್ಲ.
-ಸೈಯದ್ ತೌಫಿಕ್, ಬೇಲೂರು-ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ
ಇಂತಹ ಘಟನೆ ನಡೆಯಬಾರದು. ಪತ್ರಕರ್ತರು ಮತ್ತು ಪೊಲೀಸರು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ನಾನು ಈ ಪ್ರಕರಣದ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮವಹಿಸುವಂತೆ ವರದಿ ನೀಡುತ್ತೇನೆ ಎಂದು ಡಿವೈಎಸ್ಪಿ ಗೋಪಿ ಪ್ರತಿಕ್ರಿಯಿಸಿದ್ದಾರೆ.
"ಇದು ಪ್ರಜಾತಂತ್ರ ವ್ಯವಸ್ಥೆ, ಅಧಿಕಾರಿ ಬೆದರಿಕೆ ಹಾಕಿ ಪತ್ರಕರ್ತರ ಧ್ವನಿ ಅಡಗಿಸಲು ಪ್ರಯತ್ನಿಸಬಾರದು. ಈ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ"
-ಸ್ವಾಮಿ ಗೌಡ, ರೈತ ಮುಖಂಡ







