ಹಾಸನ | ಪತ್ರಕರ್ತನಿಗೆ ಇನ್ಸ್ಪೆಕ್ಟರ್ನಿಂದ ಬೆದರಿಕೆ ಆರೋಪ; ವಿವಿಧ ಸಂಘಟನೆ, ನಾಯಕರಿಂದ ಖಂಡನೆ

ಬೆದರಿಕೆ ಹಾಕಿರುವ ಆರೋಪ ಸಂಬಂಧ ಬೇಲೂರಿನ ಇನ್ಸ್ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಪತ್ರಕರ್ತರ ನಿಯೋಗ ಡಿವೈಎಸ್ಪಿಗೆ ದೂರು ಸಲ್ಲಿಸಿತು
ಹಾಸನ : ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೊ ಅಪ್ಲೋಡ್ ಮಾಡಿದ ಕಾರಣಕ್ಕೆ ಬೇಲೂರಿನ ಇನ್ಸ್ಪೆಕ್ಟರ್ ಒಬ್ಬರು ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯ ವಿವಿಧ ಸಂಘಟನೆಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಅವರು ಈ ಘಟನೆಯನ್ನು ವಾಕ್ಸ್ವಾತಂತ್ರ್ಯ ಹಾಗೂ ಪತ್ರಿಕೋದ್ಯಮದ ಹಕ್ಕಿಗೆ ಧಕ್ಕೆ ತರುವಂತದ್ದೆಂದು ತಿಳಿಸಿದ್ದಾರೆ.
ಇದು ಅತಿರೇಕದ ಘಟನೆ. ಪತ್ರಕರ್ತನೊಬ್ಬ ತನ್ನ ಕರ್ತವ್ಯ ನಿಭಾಯಿಸುವಾಗ ಪೊಲೀಸರ ಈ ರೀತಿಯ ಪ್ರತಿಕ್ರಿಯೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು. ನಾನು ಆ ಧ್ವನಿಯೊಂದನ್ನು ಕೇಳಿದೆ ? ಅದರಲ್ಲಿ ಒಳಗೊಂಡ ಮಾತುಗಳು ನನಗೆ ಆಘಾತವನ್ನುಂಟು ಮಾಡಿದವು. ಪೊಲೀಸ್ ಜನಸ್ನೇಹಿಯಾಗಿ ಇರಬೇಕಾದರೆ, ಈ ರೀತಿಯ ವರ್ತನೆ ಸರಿಯಲ್ಲ. ಮಾಧ್ಯಮಗಳು ಸಾರ್ವಜನಿಕ ವಿಷಯಗಳನ್ನು ಬಹಿರಂಗಪಡಿಸುವ ಕೆಲಸ ಮಾಡುತ್ತವೆ. ಅವರಿಗೆ ಬೆದರಿಕೆ ಹಾಕುವುದು ಅವರ ಸ್ಥೈರ್ಯ ಕುಗ್ಗಿಸಿದಂತೆ. ಇಂತಹ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರು ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ.
-ಧರ್ಮೇಶ್, ಅಧ್ಯಕ್ಷರು, ಜನಪರ ಹೋರಾಟ ಸಮಿತಿ
ಪೊಲೀಸ್ ಅಧಿಕಾರಿಯ ಈ ರೀತಿಯ ವರ್ತನೆ ನಿಜಕ್ಕೂ ಆತಂಕದ ಸಂಗತಿ. ಈ ಪ್ರಕರಣದಲ್ಲಿ ಪತ್ರಕರ್ತನಿಗೆ ಬೆದರಿಕೆ ಹಾಕುವಂತ ಸಂದರ್ಭವೇ ಇಲ್ಲ. ಅವರು ಸಾರ್ವಜನಿಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆದರಿಕೆ ಬದಲಿಗೆ ಸ್ಪಷ್ಟನೆ ನೀಡಬಹುದಾಗಿತ್ತು. ಇದು ಅರ್ಥವಿಲ್ಲದ ಪ್ರಕಾರ. ಇಂತಹ ವರ್ತನೆಗಳನ್ನು ಉನ್ನತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.
ಮುಹಮ್ಮದ್ ದಾವೂದ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ
ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮವು ನಾಲ್ಕನೇ ಅಂಗ. ಅವರ ಮೇಲೆ ಬೆದರಿಕೆ ಹಾಕುವುದು ಎಂದರೆ ಮಾನವ ಹಕ್ಕುಗಳ ಉಲ್ಲಂಘನೆ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರದ ಉನ್ನತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ವಾಕ್ಸ್ವಾತಂತ್ರ್ಯದ ಮೇಲಿನ ಹಲ್ಲೆ ಮತ್ತು ಪ್ರಜಾಪ್ರಭುತ್ವದ ಅವಮಾನ.
ಮರಿ ಜೋಸೆಫ್, ಸಂಚಾಲಕ, ಮಾನವ ಹಕ್ಕುಗಳ ವೇದಿಕೆ







