ಸಕಲೇಶಪುರ | ಯಡಕುಮೇರಿ ಬಳಿ ಹಳಿ ಮೇಲೆ ಬಂಡೆಕಲ್ಲು, ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ

ಸಕಲೇಶಪುರ, ಜೂ.21: ಹಾಸನ ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮಘಟ್ಟ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಭಾರೀ ಮಳೆಗೆ ರೈಲ್ವೆ ಹಳಿ ಮೇಲೆ ದೈತ್ಯಾಕಾರದ ಬಂಡೆಗಳು ಹಾಗೂ ಗುಡ್ಡ ಕುಸಿತವಾಗಿರುವ ಘಟನೆ ಸಕಲೇಶಪುರ ತಾಲೂಕಿನ ಯಡಕುಮಾರಿ ಬಳಿ ನಡೆದಿದೆ.
ಕಿಲೋಮೀಟರ್ 74 ಮತ್ತು 75 ಅರೆಬೆಟ್ಟ ಮತ್ತು ಯಡಕುಮಾರಿ ಬಳಿ ರೈಲ್ವೆ ಹಳಿ ಮೇಲೆ ಬೃಹತ್ ಬಂಡೆಗಳು ಹಾಗೂ ಗುಡ್ಡ ಕುಸಿದಿದೆ. ಇದರಿಂದ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರ್ಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಅನತಿ ದೂರಕ್ಕೆ ಬಂದು ನಿಂತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.
ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಹಾನಿಗೊಳಗಾಗಿದ್ದು, ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿಯಿಂದ ರೈಲು ನಿಲುಗಡೆಗೊಂಡಿದೆ. ಇದರಿಂದ ನೂರಾರು ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಕಾಲ ಕಳೆಯುವಂತಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಎಲ್ಲಾ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ.
ಬಂಡೆ ಬಿದ್ದಿರುವ ಸ್ಥಳಕ್ಕೆ ರೈಲ್ವೆ ಇಲಾಖೆ ರಕ್ಷಣಾ ಸಿಬ್ಬಂದಿ ತೆರಳಿದ್ದು ಬಂಡೆ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.







