ಸಕಲೇಶಪುರ: ವಾಮಾಚಾರ ಮೂಲಕ ಜೀವ ಬೆದರಿಕೆ ಆರೋಪ; ಏಳು ಮಂದಿ ವಿರುದ್ಧ ಎಫ್ಐಆರ್

ಸಕಲೇಶಪುರ, ಜುಲೈ, 1: ತಾಲೂಕಿನ ಕಡಬನಹಳ್ಳಿ ಗ್ರಾಮದ ಜಮೀನೊಂದರಲ್ಲಿ ತಾಮ್ರದ ಹಾಳೆಯನ್ನು ಮರಕ್ಕೆ ಅಂಟಿಸಿ, ವಾಮಾಚಾರ, ಮಾಟ-ಮಂತ್ರ, ಮತ್ತು ವಶೀಕರಣದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪದ ಆಧಾರದಲ್ಲಿ ಜನ್ನಾಪುರ ಮೂಲದ ಏಳು ಮಂದಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಜನ್ನಾಪುರ ಗ್ರಾಮದ ದೀಪಾ (A1), ಪ್ರಭಾ (A2), ಗಿರೀಶ್ (A3), ಯೋಗೇಶ್ (A4), ಮಂಜುನಾಥ್ (A5), ರಾಧಾಮಣಿ (A6), ಮತ್ತು ಮಂಜುಳಾ (A7) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಘಟನೆಯ ವಿವರ:
ಅವಿನಾಶ್ ಆರ್. ಅವರಿಗೆ ಸೇರಿದ ಜಮೀನಿನಲ್ಲಿ ಕಳೆದ ಒಂದು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು, ಜೂ 28ರಂದು ಬೆಳಿಗ್ಗೆ 11:30ರ ಸುಮಾರಿಗೆ ತಮ್ಮ ದಿನನಿತ್ಯದ ತೋಟದ ವೀಕ್ಷಣೆ ವೇಳೆ ಒಂದು ಮರಕ್ಕೆ ತಾಮ್ರದ ಹಾಳೆ ಮತ್ತು ತಾಮ್ರದ ಮೊಳೆ ಅಂಟಿಸಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಫೋಟೋ ಮತ್ತು ವಿಡಿಯೋ ತೆಗೆದು, ತಮ್ಮ ಮಾಲೀಕರಿಗೆ ಕಳುಹಿಸಿದ್ದಾರೆ.
ಮಾಲೀಕರ ಸೂಚನೆಯಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂ 26ರಂದು ಮಧ್ಯಾಹ್ನ 1:45ರ ಸುಮಾರಿಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಜಮೀನಿನಲ್ಲಿ ತಾಮ್ರದ ಹಾಳೆಯನ್ನು ಮರಕ್ಕೆ ಅಂಟಿಸುತ್ತಿರುವ ದೃಶ್ಯ ಕಂಡುಬಂದಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಸಕಲೇಶಪುರದ ಕಡೆಯಿಂದ ಬಂದು ಹಿಂದಿರುಗುವ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಕಾಣಿಸಿದ್ದು, ಅದರ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ವಾಮಾಚಾರ ಕೃತ್ಯ ನಡೆಸಿದ ವ್ಯಕ್ತಿಯು ಈ ಕಾರಿನಲ್ಲಿ ಬಂದು ತಾಮ್ರದ ಹಾಳೆಯನ್ನು ಅಂಟಿಸಿ, ನಂತರ ಅಲ್ಲಿಂದ ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಾನೂನು ವಿವಾದದ ಹಿನ್ನೆಲೆ ಕೃತ್ಯ:
ಕಡಬನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 1 ರಿಂದ 13, 15 ರಿಂದ 28, ಮತ್ತು 30ರ ಜಮೀನನ್ನು ಬೆಂಗಳೂರು ಮೂಲದ ಅವಿನಾಶ್ ಖರೀದಿಸಿದ್ದಾರೆ. ಈ ಜಮೀನಿಗೆ ಸಂಬಂಧಿಸಿದಂತೆ ಜನ್ನಾಪುರ ಗ್ರಾಮದ ಕೆಲವು ವ್ಯಕ್ತಿಗಳೊಂದಿಗೆ ಸಿವಿಲ್ ವಿವಾದ ನಡೆಯುತ್ತಿದೆ.
ಸಕಲೇಶಪುರ ಜೆಎಂಎಫ್‌ಸಿ ನ್ಯಾಯಾಲಯವು ಅವಿನಾಶ್ ಪರವಾಗಿ ತಾತ್ಕಾಲಿಕ ತಡೆಯಾಜ್ಞೆ (injunction order) ನೀಡಿದ್ದು, ಈ ಪ್ರಕರಣ ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ವಾಮಾಚಾರದ ಸಂಚು:
ಜೂನ್ 25 ರಂದು ಅಮವಾಸ್ಯೆ ಇದ್ದು ಈದಿನ ವಾಮಚಾರ ನಡೆಸಿದರೆ ಇದರ ಪ್ರಭಾವ ಹೆಚ್ಚಿರುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ವಾಮಾಚಾರ ನಡೆಸಿ ಜೂನ್ 26 ರಂದು ತಾಮ್ರದ ಹಾಳೆಯನ್ನು ತೋಟದ ಮರಕ್ಕೆ ಅಂಟಿಸಲಾಗಿದೆ ಎನ್ನಲಾಗುತ್ತಿದೆ.
ಹೈಕೋರ್ಟ್‌ನಲ್ಲಿ ಪ್ರಕರಣ ಸೋಲುವ ಭಯದಿಂದ ವೆಂಕಟ್ ಶೆಟ್ಟಿ ಮತ್ತು ತಿರುಮಲ ಶೆಟ್ಟಿಯ ಸೊಸೆಯಾದ ದೀಪಾ (ಗಿರೀಶ್ ವಿ.ವಿ. ಅವರ ಪತ್ನಿ) ಮತ್ತು ಪ್ರಭಾ ವಿ.ವಿ. ಈ ವಾಮಾಚಾರ ಕೃತ್ಯವನ್ನು ರೂಪಿಸಿರಬಹುದು ಎಂದು ಶಂಕಿಸಲಾಗಿದೆ.
ಪಿರ್ಯಾದಿದಾರರ ಆತಂಕ:
“ಈ ವಾಮಾಚಾರ ಕೃತ್ಯವು ನನ್ನ ಜೀವಕ್ಕೆ ಮತ್ತು ನನ್ನ ಮಾಲೀಕರ ಜೀವಕ್ಕೆ ಅಪಾಯ ಉಂಟುಮಾಡುವ ಉದ್ದೇಶದಿಂದ ನಡೆದಿರಬಹುದು. ಇದರಿಂದ ಮಾನಸಿಕ ಒತ್ತಡ ಉಂಟಾಗಿದ್ದು, ಜೀವ ಭಯದ ಭೀತಿ ಉಂಟಾಗಿದೆ. ನನ್ನ ಹಾಗೂ ಮಾಲಿಕರ ಕುಟುಂಬಕ್ಕೆ ಜೀವ ಭಯ ಎದುರಾಗಿದೆ,” ಎಂದು ಪಿರ್ಯಾದಿದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ತನಿಖೆ:
ಸಕಲೇಶಪುರ ನಗರ ಪೊಲೀಸ್ ಠಾಣೆಯು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್:
ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳಲ್ಲಿ, ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದು ಈ ಕೃತ್ಯವನ್ನು ನಡೆಸಿದ್ದಾನೆ. ತಾಮ್ರದ ಹಾಳೆಯ ಮೇಲಿನ ಭೀಕರ ಮಾನವ ಮುಖದ ಆಕೃತಿಗಳು ವಾಮಾಚಾರದ ಗಂಭೀರತೆಯನ್ನು ಬಿಂಬಿಸುತ್ತವೆ.
ಕಾನೂನು ಪರಿಣಾಮ:
ಈ ಕೃತ್ಯವು ಕರ್ನಾಟಕ ಅಮಾನವೀಯ ದುಷ್ಟ ಚಟುವಟಿಕೆಗಳು ಮತ್ತು ಮಾಟ-ಮಂತ್ರ ವಿರೋಧಿ ಕಾಯಿದೆ, 2017 ಅಡಿಯಲ್ಲಿ ದಂಡನೀಯ ಅಪರಾಧವಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.







