ಸಕಲೇಶಪುರ: ಭಾರೀ ಮಳೆಗೆ ಕುಸಿದ ಮಂಜರಾಬಾದ್ ಕೋಟೆಯ ಒಂದು ಪಾರ್ಶ್ವ

ಸಕಲೇಶಪುರ: ಆ.3: ಭಾರೀ ಮಳೆಯಿಂದಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಮಂಜರಾಬಾದ್ ಕೋಟೆಯ ಒಂದು ಪಾರ್ಶ್ವ ಶನಿವಾರ ತಡರಾತ್ರಿ ಕುಸಿದಿದೆ.
ಕೋಟೆಯ ಒಳಭಾಗದ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದು ಬಿದ್ದಿದೆ.
ತಡರಾತ್ರಿ ಈ ಘಟನೆ ಸಂಭವಿಸಿದ್ದು ಇಂದು ಮುಂಜಾನೆ ಕೋಟೆಯ ಕಾವಲು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬಂದಾಗ ಗೋಚರಿಸಿದೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ, ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಮಂಜರಾಬಾದ್ ಕೋಟೆಯನ್ನು 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದರು. ನಕ್ಷತ್ರಾಕಾರದ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ದಿನನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿದ್ದಲ್ಲಿ ಈ ಕೋಟೆಯಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ಇದೆ.
ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1965ರಿಂದ ಪುರಾತತ್ವ ಇಲಾಖೆಯು ವಹಿಸಿಕೊಂಡಿದೆ.





