Sakleshpura | ಕುಸಿದ ತೋಟಗಾರಿಕೆ ಇಲಾಖೆ ಕಟ್ಟಡ: ತಪ್ಪಿದ ಅನಾಹುತ

ಸಕಲೇಶಪುರ : ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ರವಿವಾರ ಸಂಪೂರ್ಣ ಕುಸಿದು ಬಿದ್ದಿದ್ದು, ಕಚೇರಿ ಆರಂಭಕ್ಕೂ ಮುನ್ನವೇ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ವರದಿಯಾಗಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು.
ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ವ್ಯಕ್ತಿಯೊಬ್ಬರು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅಪಾಯವಿದೆ ಎಂದು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಶನಿವಾರ ಸಂಜೆ ಕಚೇರಿಯ ಪ್ರಮುಖ ಕಡತಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.
ರವಿವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿಯಲಾರಂಭಿಸಿದ್ದು, ಸಿಬ್ಬಂದಿ ಮತ್ತಷ್ಟು ಎಚ್ಚರಿಕೆಯಿಂದ ಕಚೇರಿಯನ್ನು ತೆರೆಯದೆ ಇರಲು ನಿರ್ಧರಿಸಿದ್ದರು. ಬಳಿಕ ಬೆಳಗಿನ ಜಾವ ಕಟ್ಟಡ ಹಂತಹಂತವಾಗಿ ಸಂಪೂರ್ಣ ನೆಲಸಮವಾಗಿದೆ.
ಕಚೇರಿ ಆರಂಭವಾಗುವ ಮುನ್ನವೇ ಕಟ್ಟಡ ಕುಸಿದಿರುವುದು ಹಾಗೂ ಟೀ ಅಂಗಡಿಯ ನೀಡಿದ ಮುನ್ನೆಚ್ಚರಿಕೆಯಿಂದ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






