ಹಾಸನ | ಪ್ರೇಮಿಯ ಜೊತೆಗೂಡಿ ಪತಿಯ ಹತ್ಯೆಗೈದು ಅಪಘಾತವೆಂದು ಬಿಂಬಿಸಲು ಯತ್ನ: ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಹಾಸನ: ಪ್ರೇಮಿಯ ಜೊತೆಗೂಡಿ ಮಹಿಳೆಯೋರ್ವಳು ತನ್ನ ಪತಿಯನ್ನು ಹತ್ಯೆಗೈದು ನಂತರ ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಹಾಸನ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಮಧು (36) ಹತ್ಯೆಯಾದವರು. ಪ್ರಕರಣಕ್ಕೆ ಸಂಬಂದಿಸಿದಂತೆ ಪತ್ನಿ, ಆಕೆಯ ತಾಯಿ ಹಾಗೂ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 5ರ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 376ರ ಹೂವಿನಹಳ್ಳಿ ಬಳಿ ಮಧು ಅವರ ಮೃತದೇಹ ಪತ್ತೆಯಾಗಿತ್ತು. ಮೊದಲಿಗೆ ಇದು ರಸ್ತೆ ಅಪಘಾತದಿಂದ ಸಾವು ಎಂಬಂತೆ ಪೊಲೀಸರು ಪ್ರಾಥಮಿಕವಾಗಿ ದಾಖಲಿಸಿದ್ದರು. ಆದರೆ, ಮುಂದಿನ ತನಿಖೆಯಲ್ಲಿ ಇದು ಕೊಲೆ ಎಂದು ಬಹಿರಂಗವಾಯಿತು.
ಮೂವರು ಆರೋಪಿಗಳ ಬಂಧನ:
ಮೂವರು ಆರೋಪಿಗಳು ಸೇರಿ ಪಾನೀಯದಲ್ಲಿ ಮದ್ಯ ಬೆರೆಸಿ ಮಧು ಅವರಿಗೆ ಕುಡಿಸಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ರಸ್ತೆ ಪಕ್ಕ ಎಸೆದು, ಬೈಕ್ ಅಪಘಾತವಾಯಿತು ಎಂಬ ನಾಟಕವಾಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





