ಅರಕಲಗೂಡು| ರೀಲ್ಸ್ ಮಾಡುವ ವೇಳೆ ಟ್ರ್ಯಾಕ್ಟರ್ ಪಲ್ಟಿ: ಯುವಕ ಮೃತ್ಯು

ಅರಕಲಗೂಡು: ರೀಲ್ಸ್ ಮಾಡುವ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಣನೂರು ಹೋಬಳಿ ಕಬ್ಬಳಿಗೆರೆ ಬೆಟ್ಟದಲ್ಲಿ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ವಿ.ಜಿ. ಕೊಪ್ಪಲಿನ ಕಿರಣ್ (19) ಮೃತಪಟ್ಟ ಯುವಕ. ಮಿನಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ವೇಳೆ ರೀಲ್ಸ್ ಮಾಡಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಿರಣ್ ಕಬ್ಬಳಿಗೆರೆ ಸಮೀಪದ ಗದ್ದೆ ಉಳುಮೆ ಮಾಡಲು ಬಂದಿದ್ದ ಎನ್ನಲಾಗಿದೆ. ಉಳುಮೆ ಕೆಲಸ ಮುಗಿದ ಬಳಿಕ ಕಬ್ಬಳಿಗೆರೆ ಬೆಟ್ಟಕ್ಕೆ ಟ್ರ್ಯಾಕ್ಟರ್ ಮೂಲಕ ಹೋಗಿದ್ದು ನಂತರ ಹಿಂದಿರುಗುವ ವೇಳೆ ರೀಲ್ಸ್ ಮಾಡುವುದಕ್ಕೆಂದು ಕಡಿದಾದ ಇಳಿಜಾರಿನ ತಿರುವಿನಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಅದು ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





