ಸ್ಟಿಂಗ್ ಆಪರೇಷನ್ ನಡೆಸಿದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? : ಕುಮಾರಸ್ವಾಮಿ ಪ್ರಶ್ನೆ
"2028ರ ವಿಧಾನಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ"

ಹಾಸನ: ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರಕರಣದ ತನಿಖೆಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದಾರೆ.
ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಸ್ಟಿಂಗ್ ಆಪರೇಷನ್ ನಡೆಸಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವಾಗ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ನಗರದ ರಿಂಗ್ ರಸ್ತೆ ಬಳಿಯ ಶಾಸಕರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಿಂದ ಹಿಡಿದು ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ಆರೋಪದವರೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.
ಮುಖ್ಯಮಂತ್ರಿ ಮತ್ತು ಗೃಹ ಸಚಿವರ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಒಪ್ಪಿಕೊಂಡಿದ್ದರೂ ಕ್ರಮ ಕೈಗೊಳ್ಳದಿರುವುದೇಕೆ? :
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಯೇ ಅದನ್ನು ನಡೆಸಿರುವುದಾಗಿ ಒಪ್ಪಿಕೊಂಡಿದ್ದರೆ, ತನಿಖೆಗೆ ಮತ್ತೆ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿರುವುದರ ಔಚಿತ್ಯವೇನು ಎಂದು ಅವರು ಪ್ರಶ್ನೆಸಿದ್ದಾರೆ.
ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಇಂತಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ, ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ತನಿಖೆಯ ಹೆಸರಿನಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಜಿಪಿ ಭೇಟಿ ಬಳಿಕವೂ ಸಮಾಧಾನವಿಲ್ಲ :
ಪ್ರಕರಣದ ಕುರಿತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳ ಪ್ರತಿಕ್ರಿಯೆಯಿಂದ ತಮಗೆ ನಿರೀಕ್ಷಿತ ಭರವಸೆ ದೊರೆತಿಲ್ಲ ಎಂದರು.
“ನಿನ್ನೆ ಡಿಜಿಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಅಲ್ಲಿನವರ ಮುಖಭಾವ ನೋಡಿದರೆ ಸೂಕ್ತ ತನಿಖೆ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ತನಿಖೆ ನಡೆಸಲು ದಾಖಲೆಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಒಪ್ಪಿಕೊಂಡಿರುವಾಗ ಮತ್ತೆ ಯಾವ ದಾಖಲೆ ನೀಡಬೇಕು?” ಎಂದು ಪ್ರಶ್ನಿಸಿದರು.
ಪ್ರಕರಣದ ತನಿಖೆಯಲ್ಲಿ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶ ನೀಡಬಾರದು. ಆರೋಪಗಳ ಸತ್ಯಾಸತ್ಯತೆ ಹೊರಬರಲು ಕಾನೂನುಬದ್ಧವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ನನ್ನನ್ನು ಕೆರಳಿಸಲು ಪ್ರಯತ್ನ ನಡೆಯುತ್ತಿದೆಯೇ?
ಕಳೆದ ಒಂದು ವಾರದಿಂದ ಗೃಹ ಸಚಿವರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ತಮ್ಮನ್ನು ಉದ್ರೇಕಗೊಳಿಸುವಂತೆ ಮುಖ್ಯಮಂತ್ರಿ ಅವರಿಂದ ಸೂಚನೆ ಬಂದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ತಮ್ಮನ್ನು ‘ಉತ್ತರ ಕುಮಾರ’ ಎಂದು ಕರೆದಿರುವುದಕ್ಕೂ ತಿರುಗೇಟು ನೀಡಿದ ಅವರು, ರಾಜಕೀಯವಾಗಿ ಟೀಕೆಗಳನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ, ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪ ಕೇಳಿಬಂದಾಗ ಸರ್ಕಾರ ಅವುಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಪತ್ತೆಹಚ್ಚಬೇಕು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವ ಬದಲು ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಆಕ್ಷೇಪಿಸಿದರು.
ರಾಜ್ಯದ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಪಿ. ಸ್ವರೂಪ್, ಎ. ಮಂಜು, ಬಿ.ಆರ್. ಸತ್ಯನಾರಾಯಣ್, ಸುಮುಖ ರಘು, ಪ್ರಸಾದ್ ತ್ಯಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






