ಹಾವೇರಿ | ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ: ಓರ್ವನ ಬಂಧನ

ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿ
ಹಾವೇರಿ, ಸೆ.27: ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ಮಾಡಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ ಘಟನೆ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಸೆ.26ರಂದು ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮಮದಾಪುರ ಗ್ರಾಮದ ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿ ಬಂಧಿತ ಆರೋಪಿ.
ಪಟ್ಟಣದ ನರ್ಸಿಂಗ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ನ ಮೊದಲನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಸೆ.15ರಂದು ಮಧ್ಯಾಹ್ನ 3:30ರ ವೇಳೆ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಶಿಗ್ಗಾಂವಿಯ ಕುನ್ನೂರಿನಿಂದ ಮನೆಗೆ ಹೋಗುತ್ತಿದ್ದ ವೇಳೆ ಅಭಿಷೇಕ್ ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ಮಾಡುವಾಗ ಹೆದರಿಸಿ ವೀಡಿಯೊ ಮಾಡಿದ ಆರೋಪಿ, ಇನ್ನು ಮುಂದೆ ಹೇಳಿದಂತೆ ಕೇಳಬೇಕು. ಇಲ್ಲದೇ ಹೋದರೆ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿನಿಯನ್ನು ಅಪಹರಿಸಿದ ಜಾಗಕ್ಕೆ ಇಳಿಸಿ ಹೋಗಿದ್ದಾನೆ. ಸೆ.17ರಂದು ರಾತ್ರಿ ವಿದ್ಯಾರ್ಥಿನಿಯನ್ನು ಹೆದರಿಸಿ ಹಿತ್ತಲಕ್ಕೆ ಕರೆಸಿದ ಅಭಿಷೇಕ್, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆರೋಪಿಯ ಕಿರುಕುಳ ತಾಳಲಾಗದೆ ಮನನೊಂದ ವಿದ್ಯಾರ್ಥಿನಿ, ಸೆ.24ರಂದು ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಸಂಬಂಧ ದೂರು ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







