ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ : ನಾನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿದೆ ಎನ್ನುವ ಕುರಿತು ಗುರುವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು, ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ ಎಂದರು.
ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವಂತ ಪಕ್ಷ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ನಡುವೆ ನಡೆಯುತ್ತಿರುವ ವಾಕ್ ಸಮರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ರಾಮುಲು ಹಾಗೂ ಜನಾರ್ದನ ರೆಡ್ಡಿ ಆತ್ಮೀಯ ಸ್ನೇಹಿತರು. ಒಮ್ಮೊಮ್ಮೆ ಈ ರೀತಿ ವ್ಯತ್ಯಾಸಗಳು ಕಂಡು ಬರುತ್ತವೆ. ಆನಂತರ ಎಲ್ಲ ಸರಿಹೋಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಇಬ್ಬರ ಹತ್ತಿರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು.