ರಾಜ್ಯ ಕಾಂಗ್ರೆಸ್ನಲ್ಲಿನ ಅಧಿಕಾರ ಹಂಚಿಕೆಯ ಆಂತರಿಕ ಗೊಂದಲದಿಂದ ಆಡಳಿತ ಕುಂಠಿತ : ಬೊಮ್ಮಾಯಿ

ಬಸವರಾಜ ಬೊಮ್ಮಾಯಿ
ಹಾವೇರಿ, ಅ. 11: ರಾಜ್ಯ ಕಾಂಗ್ರೆಸ್ನಲ್ಲಿನ ಅಧಿಕಾರ ಹಂಚಿಕೆಯ ಆಂತರಿಕ ಗೊಂದಲದಿಂದ ಆಡಳಿತ ಕುಂಠಿತವಾಗಿದ್ದು ಹೈಕಮಾಂಡ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅಧಿಕಾರ ಹಸ್ತಾಂತರ, ಸಚಿವ ಸ್ಥಾನಗಳ ಹಂಚಿಕೆ ಗೊಂದಲ ನಿಂತಿಲ್ಲ. ಸಿ.ಎಂ ಕಡೆಯವರು ಅವರೇ 5ವರ್ಷ ಮುಂದುವರೆಯುತ್ತಾರೆ ಎಂದರೆ, ಶಿವಕುಮಾರ್ ಕಡೆಯವರು ಶಿವಕುಮಾರ್ ಸಿ.ಎಂ ಆಗುತ್ತಾರೆ ಎನ್ನುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ವರಿಷ್ಠರಿಗೆ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಅಲ್ಲಿಯೂ ಎರಡು ಗುಂಪು ಆಗಿವೆ. ಹೀಗಾಗಿ ಹೈಕಮಾಂಡ್ ಪುಲ್ ಸ್ಟಾಪ್ ಇಡಲು ಆಗುತ್ತಿಲ್ಲ. ಒಂದು ಗುಂಪು ಸಿಎಂಗೆ ಬೆಂಬಲ ಮಾಡುತ್ತದೆ. ಇನ್ನೊಂದು ಗುಂಪು ಡಿ.ಕೆ.ಶಿವಕುಮಾರ್ಗೆ ಸಪೋರ್ಟ್ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಬಿಹಾರ ಚುನಾವಣೆಗೆ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಈಡಿ ತನಿಖೆ ನಡೆಸುತ್ತಿದೆ. ವೀರೆಂದ್ರಗೆ ಪಪ್ಪಿಗೆ ಈ ಹಣ ಎಲ್ಲಿಂದ ಬಂತು. ಇನ್ನು ಎಷ್ಟು ಇದೆ ಎಂಬುದು ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದ ಅವರು, ಸಿದ್ದರಾಮಯ್ಯ ಸರಕಾರದ ಬಳಿ ಹಣವಿಲ್ಲದ ಕಾರಣಕ್ಕೆ ಇಂದಿರಾ ಕಿಟ್ ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.







