ಸಿಬ್ಬಂದಿ ನೇಮಕ, ವೈದ್ಯಕೀಯ ಸಲಕರಣೆ ಒದಗಿಸಲು ಬಸವರಾಜ ಬೊಮ್ಮಾಯಿ ಆಗ್ರಹ

ಹಾವೇರಿ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯ ಶಿಗ್ಗಾವಿಯಲ್ಲಿ 250 ಹಾಸಿಗೆಯ ಆಸ್ಪತ್ರೆ ಉದ್ಘಾಟನೆಗೆ ಆಗಮಿಸುತ್ತಿದ್ದು, ಉದ್ಘಾಟನೆಯಾದ ತಕ್ಷಣ ಆಸ್ಪತ್ರೆ ಆರಂಭ ಆಗುವುದಿಲ್ಲ. ಎರಡು-ಮೂರು ತಿಂಗಳಲ್ಲಿ ವೈದ್ಯರ ನೇಮಕ, ವೈದ್ಯಕೀಯ ಸಲಕರಣೆ, ಹಾಸಿಗೆ ವ್ಯವಸ್ಥೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರವಿವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರೋಗ್ಯ ಸಚಿವರು ಕೇವಲ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆ ಉದ್ಘಾಟನೆ ಆದ ತಕ್ಷಣ ಆಸ್ಪತ್ರೆ ಆರಂಭ ಆಗುವುದಿಲ್ಲ. ಯಾಕೆದಂರೆ ನಾನು ಸಿಎಂ ಆಗಿದ್ದಾಗ 250 ಹಾಸಿಗೆ ಆಸ್ಪತ್ರೆಗೆ ಮಂಜೂರಾತಿ ಮಾಡಿದ್ದೆ ಎಂದು ಸ್ಮರಿಸಿದ್ದಾರೆ.
ಸಿಬ್ಬಂದಿ ಕೊರತೆ: ಈಗಿರುವ ನೂರು ಹಾಸಿಗೆ ಆಸ್ಪತ್ರೆಗೆ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೊರತೆ ಇದೆ. ಈಗ ಉದ್ಘಾಟನೆ ಮಾಡುತ್ತಿರುವ 250 ಹಾಸಿಗೆಯ ಆಸ್ಪತ್ರೆಗೆ ಹೊಸ ಹುದ್ದೆಗಳು ಮಂಜೂರಾಗಿಲ್ಲ. ಹೀಗಿರುವಾಗ ಇದರ ಉದ್ಘಾಟನೆಯಿಂದ ಶಿಗ್ಗಾವಿ ತಾಲೂಕು ಹಾಗೂ ಸುತ್ತಲಿನ ತಾಲೂಕಿನ ಜನರಿಗೆ ಏನು ಪ್ರಯೋಜನ ಆಗುತ್ತದೆ. ಆದುದರಿಂದ ಈಗಿರುವ ಆಸ್ಪತ್ರೆಯಿಂದ ವ್ಯವಸ್ಥೆ ಸುಧಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ವೈದ್ಯಕೀಯ ಸೇವೆಯ ಕೊರತೆಯಿಂದ ನರಳುತ್ತಿದೆ ಎಂದು ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್ ಒಬ್ಬ ಸಮರ್ಥ ಆರೋಗ್ಯ ಸಚಿವರು ಎಂದು ನಂಬಿದ್ದೇವೆ. ಅವರು ತಿಳುವಳಿಕೆ ಇದ್ದವರು. ಅವರು ಇದೆಲ್ಲ ವ್ಯವಸ್ಥೆ ಮಾಡಿ ಉದ್ಘಾಟನೆ ಮಾಡುತ್ತಾರೆ ಎಂದು ನಂಬಿದ್ದೇವು. ಆ ಹಿನ್ನೆಲೆಯಲ್ಲಿ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯದಿದ್ದರೂ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಿದ್ದರೆ ಸಾರ್ಥಕ ಆಗುತ್ತಿತ್ತು.
ದಿನೇಶ್ ಗುಂಡೂರಾವ್‍ಗೆ ಒಳ್ಳೆಯ ಹೆಸರು ಬರುತ್ತಿತ್ತು, ಅದು ಆಗದಿರುವುದು ನಮಗೆ ನಿರಾಸೆಯಾಗಿದ್ದು ಕನಿಷ್ಡ ಎರಡು-ಮೂರು ತಿಂಗಳಲ್ಲಿ ವೈದ್ಯರ ನೇಮಕ ಮಾಡಿ ಎಲ್ಲ ವೈದ್ಯಕೀಯ ಸಲಕರಣೆ, ಹಾಸಿಗೆ ವ್ಯವಸ್ಥೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಹಳೆ ಅಸ್ಪತ್ರೆ ರಿಪೇರಿ ಇದರಲ್ಲಿದೆ. ಅದನ್ನು ಕೂಡಲೆ ಪ್ರಾರಂಭ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.






