ಕನಕದಾಸರಿಗೆ ಜಾತಿಯ ಲೇಪ ಹಚ್ಚಬೇಡಿ: ಸಿಎಂ ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್
ಹಾವೇರಿ : ಕನಕದಾಸರನ್ನು ಜಾತಿಯ ಚೌಕಟ್ಟಿನಲ್ಲಿ ನೋಡಬಾರದು. ಅವರ ತತ್ವ, ಭಕ್ತಿ ಮತ್ತು ಸಂದೇಶಗಳನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಹಾವೇರಿಯ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕದಾಸರ ಹೆಸರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಜಾತಿ ವಿಚಾರವನ್ನು ಬದಿಗಿಟ್ಟು ಭಕ್ತಿಯ ಮಾರ್ಗದಲ್ಲಿ ಸಾಗಬೇಕು ಎಂಬ ಸಂದೇಶವನ್ನು ಕನಕದಾಸರು ನೀಡಿದ್ದಾರೆ. ಕೃಷ್ಣನನ್ನು ಒಲಿಸಿಕೊಂಡ ಅವರು ಎಲ್ಲ ವರ್ಗದ ಜನರಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು. ಮಠದ ಶ್ರೀಗಳು ಇಂದು ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಸಚಿವ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ
ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್,ನೀವು ಹೇಳುತ್ತಿದ್ದೀರಿ ಅಷ್ಟೇ, ಈ ಬಗ್ಗೆ ಯಾರೂ ನನ್ನ ಬಳಿ ಪ್ರಸ್ತಾಪಿಸಿಲ್ಲ. ಹಿಂದೆ ಏನಾದರೂ ವಿಚಾರ ಇದ್ದಿರಬಹುದು. ಆದರೆ, ಈಗ ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ" ಎಂದು ಹೇಳಿದರು. ಶಿವಣ್ಣನವರ್ ಅವರನ್ನು ತಾನೇ ಕಾಂಗ್ರೆಸ್ಗೆ ಕರೆತಂದಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ವರದಾ–ಬೇಡ್ತಿ ನದಿ ಜೋಡಣೆಗೆ ಸಮ್ಮತಿ
ವರದಾ–ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಮಾತನಾಡಿದ ಅವರು, ಯೋಜನೆಗೆ ಈಗಾಗಲೇ ನಮ್ಮ ಸಮ್ಮತಿ ನೀಡಿದ್ದೇವೆ. ಈ ವಿಚಾರವಾಗಿ ಮೂವರು ಮುಖ್ಯಮಂತ್ರಿಗಳು ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ವಿಚಾರ
ಆಶಾ ಕಾರ್ಯಕರ್ತೆಯರ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, ಆಶಾ ಕಾರ್ಯಕರ್ತೆಯರಿಗೆ ವಿಚಾರ ಅರ್ಥವಾಗಿದೆ. ಕೆಲವು ಸಂಘಟನೆಗಳಿಂದ ಒತ್ತಡವಿದೆ. ಅವರೂ ಒಳ್ಳೆಯವರೇ, ಅವರ ಪರಿಸ್ಥಿತಿಯೂ ನಮಗೆ ಅರ್ಥವಾಗುತ್ತದೆ ಎಂದರು. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರ ಮೊದಲು ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.






