ಹಾವೇರಿ | ಮುಸ್ಲಿಮರ ಬಗ್ಗೆ ಅವಹೇಳನಾಕಾರಿ ಹೇಳಿಕೆ ಆರೋಪ; ವೈದ್ಯನ ಮೇಲೆ ಹಲ್ಲೆ, ದೂರು- ಪ್ರತಿದೂರು ದಾಖಲು

ಹಾವೇರಿ : ಮುಸ್ಲಿಂ ಸಮುದಾಯದ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ನಗರದ ಕೋಟೆ ಓಣಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.
ರಾಜೇಶ್ವರಿ ನಗರದ ನಿವಾಸಿ ಡಾ.ಗುರುಮೂರ್ತಯ್ಯ ರಾಚೋಟಿಮಠ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಕ್ಸೂದ್ ಮೊಮೀನ್, ಸೈಯದ್ ಅಹ್ಮದ್ ಮಕಾಂದಾರ, ಸೈಯದ್ ಹೊನ್ನಾಳಿ, ಜಾಫರ ಸಾಧೀಕ್ ಕಿಲ್ಲೇದಾರ, ಅಬ್ದುಲ್ ಮೊನಾಪ್ ಮೊಮೀನ್ ಸೇರಿ 20 ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಸ್ಲಾಂ ಧರ್ಮದ ಬಗ್ಗೆ ಅಗೌರವವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಡಾ.ಗುರುಮೂರ್ತಯ್ಯನ ಕ್ಲಿನಿಕಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ವೈದ್ಯನ ಕ್ಲಿನಿಕ್ ಎದುರು ನಿಲ್ಲಿಸಿದ್ದ ಬೈಕ್‌ಗೆ ಹಾನಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೂಡಲೇ ಘಟನಾ ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು, ವೈದ್ಯನನ್ನು ರಕ್ಷಣೆ ಮಾಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆತಂದಿದ್ದಾರೆ. ನಗರ ಪೊಲೀಸ್ ಠಾಣೆಯ ದೂರು ಮತ್ತು ಪ್ರತಿದೂರು ದಾಖಲಾಗಿದೆ.







