Haveri | ಧರ್ಮಾ ಜಲಾಶಯದ ನೀರು ಬೇರೆಡೆ ಸಾಗಿಸುವ ಆತಂಕ ; ಜನರ ಆಕ್ರೋಶ
ಹಾನಗಲ್‌ನಲ್ಲಿ ಪೈಪ್‌ಲೈನ್ ಕಾಮಗಾರಿಗೆ ತಡೆ, ಅಧಿಕಾರಿಗಳ ಸ್ಪಷ್ಟನೆಗೂ ಒಪ್ಪದ ಜನರು

ಹಾವೇರಿ: ಧರ್ಮಾ ಜಲಾಶಯದ ನೀರನ್ನು ಬೇರೆ ತಾಲೂಕುಗಳಿಗೆ ಹಾಗೂ ಕೈಗಾರಿಕೆಗಳ ಬಳಕೆಗೆ ಸಾಗಿಸುವ ಉದ್ದೇಶದಿಂದ ಪೈಪ್‌ಲೈನ್ ಅಳವಡಿಸಲಾಗುತ್ತಿದೆ ಎಂಬ ಸ್ಥಳೀಯರ ಆತಂಕ ನಿವಾರಣೆಯಾಗದ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಸ್ಥಗಿತಗೊಂಡಿದೆ.
ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸುವ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ (AEE) ಶ್ರೀಧರ ಹೊಸಮನಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದರು. ಆದರೆ, ಅಧಿಕಾರಿಗಳ ವಿವರಣೆಯಿಂದ ಸಮಾಧಾನಗೊಳ್ಳದ ಸಾರ್ವಜನಿಕರು ತಮ್ಮ ವಿರೋಧವನ್ನು ಮುಂದುವರಿಸಿದರು.
ಧರ್ಮಾ ಜಲಾಶಯದ ನೀರು ಹಾನಗಲ್ ತಾಲೂಕಿನ ಜನರ ಬಳಕೆಗೆ ಮಾತ್ರ ಸೀಮಿತವಾಗಿರಬೇಕು. ಜಲಾಶಯದ ನೀರನ್ನು ಬೇರೆ ಪ್ರದೇಶಗಳಿಗೆ ಅಥವಾ ಕೈಗಾರಿಕೆಗಳ ಬಳಕೆಗೆ ಒದಗಿಸುವ ಯಾವುದೇ ಉದ್ದೇಶಿತ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತುಂಗಭದ್ರಾ ನದಿಯ ನೀರನ್ನು ಗ್ರಾಮೀಣ ಪ್ರದೇಶಗಳಿಗೆ ಪೂರೈಸಲು ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಈಗಾಗಲೇ ಹಾನಗಲ್ ಪಟ್ಟಣದ ಪ್ರವೇಶ ಭಾಗದಲ್ಲಿರುವ ಹುಬ್ಬಳ್ಳಿ ರಸ್ತೆಯ ಸಾರಿಗೆ ಫಟಕದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಮುಂದುವರಿದ ಕಾಮಗಾರಿ ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಈ ಯೋಜನೆಯು ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹೀಗಾಗಿ ಕಾಮಗಾರಿ ಮುಂದುವರಿಸಲು ಸ್ಥಳೀಯರು ಅವಕಾಶ ನೀಡಬೇಕು ಎಂದು ಶ್ರೀಧರ ಹೊಸಮನಿ ಮನವಿ ಮಾಡಿದರು. ಆದರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಧರ್ಮಾ ಜಲಾಶಯದ ನೀರನ್ನು ಬೇರೆಡೆಗೆ ಸಾಗಿಸುವ ಹುನ್ನಾರ ನಡೆಯುತ್ತಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ ಸ್ಥಳೀಯರು, ಅಧಿಕಾರಿಗಳ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ.
ಮೊದಲು ನೀರು ಹರಿಸಿ, ಬಳಿಕ ಕಾಮಗಾರಿ ಆರಂಭಿಸಿ
ಸಾರಿಗೆ ಫಟಕದ ವೃತ್ತದವರೆಗೆ ಈಗಾಗಲೇ ಅಳವಡಿಸಿರುವ ಪೈಪ್‌ಲೈನ್‌ನಲ್ಲಿ ತಡಸ ಬಹುಗ್ರಾಮ ಯೋಜನೆಯ ನೀರನ್ನು ಹರಿಸಿ ತೋರಿಸಬೇಕು. ಈ ಮೂಲಕ ಯೋಜನೆಯ ನೈಜ ಉದ್ದೇಶವನ್ನು ಸಾರ್ವಜನಿಕವಾಗಿ ದೃಢಪಡಿಸಿದ ಬಳಿಕವಷ್ಟೇ ಪಟ್ಟಣ ವ್ಯಾಪ್ತಿಯಲ್ಲಿ ಮುಂದಿನ ಕಾಮಗಾರಿಗೆ ಅವಕಾಶ ನೀಡಲಾಗುವುದು ಎಂದು ಸ್ಥಳೀಯರು ಪಟ್ಟು ಹಿಡಿದರು. ಇದೇ ವೇಳೆ, ಯೋಜನೆಯ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿ ಫಲಕಗಳನ್ನು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕು.
ಈಗಾಗಲೇ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳಲ್ಲಿ ಜಲ್ಲಿಕಲ್ಲು ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದರು. ಸ್ಥಳೀಯರ ಅನುಮಾನಗಳಿಗೆ ಸ್ಪಷ್ಟ ಹಾಗೂ ವಿಶ್ವಾಸಾರ್ಹ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮನವೊಲಿಕೆ ಪ್ರಯತ್ನ ಫಲ ನೀಡಲಿಲ್ಲ. ಪರಿಣಾಮವಾಗಿ, ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಈವರೆಗೂ ಆರಂಭವಾಗದೆ ಸ್ಥಗಿತಗೊಂಡಿತು.






