Haveri | ಜಾಗದ ಬೇಲಿ ವಿಚಾರವಾಗಿ ಗಲಾಟೆ: ವ್ಯಕ್ತಿಯ ಮೇಲೆ ಹಲ್ಲೆ ಆರೋಪ
ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹಾವೇರಿ: ಮನೆ ಹಿತ್ತಲಿನ ಜಾಗ ಹಾಗೂ ಬೇಲಿ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾವೇಕೇರಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ 44 ವರ್ಷದ ಬಸವರಾಜ ಶಿವಪ್ಪ ತಂಬೊಳ್ಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಹಿತ್ತಲಿನ ಜಾಗ ಮತ್ತು ಬೇಲಿ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ನಾಲ್ವರ ಗುಂಪು ಬಡಿಗೆ ಹಾಗೂ ಕತ್ತಿ ಹಿಡಿದು ಬಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ ದೂರಿದ್ದಾರೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಎ1 ಜಾಫರ್ಸಾಬ್ ಶಿಕಾರಿ, ಎ2 ಮಹಮ್ಮದಗೌಸ್ ಜಾಫರ್ಸಾಬ್, ಎ3 ಮಹಮ್ಮದ್ ಸಜೀದಾ ಜಾಫರ್ಸಾಬ್ ಹಾಗೂ ಎ4 ಹಸೀನಾಬಾನು ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಹಾನಗಲ್ ತಾಲೂಕಿನ ಸಾವೇಕೇರಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.




