Haveri| ವಿದ್ಯುತ್ ಅವಘಡಕ್ಕೆ ಭತ್ತದ ಹುಲ್ಲಿನ ಕಟ್ಟು, ಟ್ರ್ಯಾಕ್ಟರ್ ಭಸ್ಮ

ಹಾವೇರಿ : ಜಿಲ್ಲೆಯ ಎರಡು ಪ್ರತ್ಯೇಕ ಗ್ರಾಮಗಳಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಭತ್ತದ ಹುಲ್ಲಿನ ಕಟ್ಟು ಮತ್ತು ಟ್ರ್ಯಾಕ್ಟರ್ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮ ಹಾಗೂ ಬ್ಯಾಡಗಿ ತಾಲೂಕಿನ ಸುಡಂಬಿ ಗ್ರಾಮದಲ್ಲಿ ಈ ಅವಘಡಗಳು ಸಂಭವಿಸಿವೆ.
ಭತ್ತದ ಹುಲ್ಲಿನ ಕಟ್ಟು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಅದರ ಕೆನ್ನಾಲಿಗೆಗೆ ಭತ್ತದ ಹುಲ್ಲಿನ ಕಟ್ಟು ಹಾಗೂ ಟ್ರ್ಯಾಕ್ಟರ್ ಸುಟ್ಟು ಕರಕಲಾಗಿವೆ.
ಘಟನೆಯಲ್ಲಿ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಬೆಳೆ ಸಂಗ್ರಹಿಸಿಟ್ಟಿದ್ದ ರೈತರು ವಿದ್ಯುತ್ ಅವಘಡದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎರಡೂ ಘಟನೆಗಳು ರಟ್ಟಿಹಳ್ಳಿ ಹಾಗೂ ಬ್ಯಾಡಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದು, ಅವಘಡದ ನಿಖರ ಕಾರಣ ತಿಳಿದುಬರಬೇಕಿದೆ.
Next Story




