ಹಾವೇರಿ | ಶಾಲಾ ಕಟ್ಟಡ ಒತ್ತುವರಿ ಪ್ರಕರಣ; ಶಾಲೆಗೆ ಬೀಗ ಹಾಕಿದ ದೂರುದಾರ : ಬಿಸಿಲಲ್ಲೇ ಕುಳಿತ ಮಕ್ಕಳು

ಹಾವೇರಿ : ಸರಕಾರಿ ಶಾಲೆಯ ಜಾಗಕ್ಕೆ ಸಂಬಂಧಿಸಿದ ವಿವಾದ ಶಾಲೆಯ ಬಾಗಿಲಿಗೆ ಬೀಗ ಹಾಕುವ ಹಂತಕ್ಕೆ ಬಂದಿರುವ ಘಟನೆ ಮಲ್ಲೂರು ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಈರಪ್ಪ ಕುಲಕರ್ಣಿ ಎಂಬ ವ್ಯಕ್ತಿ ಮಲ್ಲೂರು ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಗೇಟಿಗೆ ಬೀಗ ಹಾಕಿದ್ದರಿಂದ ಶಾಲಾ ಮಕ್ಕಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ, ಶಾಲೆಯ ಹೊರ ಗಡೆ ಬಿಸಿಲಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ವಿವಾದದ ಹಿನ್ನೆಲೆ :
ಈರಪ್ಪ ಕುಲಕರ್ಣಿ ತಂದೆ ಶಂಕ್ರಪ್ಪ ಕುಲಕರ್ಣಿ ಅವರು ಐದು ಗುಂಟೆ ಜಾಗವನ್ನು ಉರ್ದು ಶಾಲೆಗಾಗಿ ದಾನವಾಗಿ ನೀಡಿದ್ದರು. ಆದರೆ ಶಾಲೆ ಕಟ್ಟುವ ವೇಳೆ ದಾನವಾಗಿ ನೀಡಿದ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಈರಪ್ಪಕುಲಕರ್ಣಿ ಆರೋಪಿಸಿದ್ದರು.
ಈ ವ್ಯಾಜ್ಯ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದು, ಜಾಗ ಒತ್ತುವರಿ ಕುರಿತಂತೆ ಈಗಾಗಲೇ ವ್ಯಾಜ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಈರಪ್ಪಕುಲಕರ್ಣಿ ಸೋಮವಾರ ರೊಚ್ಚಿಗೆದ್ದು ಶಾಲೆಯ ಬಾಗಿಲಿಗೆ ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡಗಿ ತಹಶೀಲ್ದಾರ್ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಮುಂದಾದರು.
ನಮ್ಮ ತಂದೆ ಶಾಲೆಗೆ ಐದು ಗುಂಟೆ ಜಾಗ ನೀಡುವುದಾಗಿ ಹೇಳಿದ್ದು ಸತ್ಯ. ಆದರೆ ಆ ಖರಾಬ್ ಜಾಗದಲ್ಲಿ ನಮ್ಮ ಹೆಸರು ದಾಖಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ. ಆದರೂ ನಾವು ಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ. ನಾವು ಮೂರು ಜನ ಅಣ್ಣ ತಮ್ಮಂದಿರು ಒಪ್ಪಂದದಂತೆ ಎಂಟು ಗುಂಟೆ ಜಾಗವನ್ನು ಶಾಲೆಗೆ ನೀಡಲು ಸಿದ್ಧರಿದ್ದೇವೆ. ಆದರೆ ನಮಗೆ ಅನ್ಯಾಯವಾಗಿದೆ. ಅದಕ್ಕಾಗಿಯೇ ಬೀಗ ಹಾಕಬೇಕಾಯಿತು.
-ಈರಪ್ಪಕುಲಕರ್ಣಿ







