ಹಾವೇರಿ | ಪ್ರತ್ಯೇಕ ಪ್ರಕರಣ : ಹೋರಿ ತಿವಿದು ಮೂವರು ಮೃತ್ಯು

ಹಾವೇರಿ, ಅ.23: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಮತ್ತು ಮೆರವಣಿಗೆ ವೇಳೆ ಹೋರಿ ತಿವಿದು ಮೂವರು ಮೃತಪಟ್ಟಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಹಾವೇರಿ ಪಟ್ಟಣದ ದಾನೇಶ್ವರಿನಗರದ ಪಿ.ಬಿ.ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ(70) ಎಂಬವರಿಗೆ ಹೋರಿ ಬೆದರಿಸುವ ಸ್ಪರ್ಧೆಯಿಂದ ತಪ್ಪಿಸಿಕೊಂಡ ಹೋರಿ ತಿವಿದಿದ್ದು, ತೀವ್ರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ಘಟನೆಯಲ್ಲಿ ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಸಂಭ್ರಮದ ಅಂಗವಾಗಿ ಎತ್ತುಗಳ ಮೆರವಣಿಗೆ ನಡೆಯುತ್ತಿದ್ದ ವೇಳೆ ಹೆದರಿ ಓಡಿದ ಎತ್ತು ಘನಿಸಾಬ್ ಮುಹಮ್ಮದ್ ಹುಸೇನ್ ಬಂಕಾಪುರ (75) ಎಂಬವರ ಕುತ್ತಿಗೆ ಮತ್ತು ಎದೆಗೆ ತಿವಿದು ಗಂಭೀರ ಗಾಯಗೊಳಿಸಿತ್ತು. ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದು ಘಟನೆಯಲ್ಲಿ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಭರತ್ ಎಂಬ ಯುವಕನ ತಲೆಗೆ ಹೋರಿ ತಿವಿದು ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.







