ಹಾವೇರಿ | ರಾಣೆಬೆನ್ನೂರಿನಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಾಯ

ಹಾವೇರಿ: ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ನ ಟೇಲರ್ ಗೆ ಟಾಟಾ ಏಸ್ ವಾಹನ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ನಿವಾಸಿಗಳಾದ ಚಮಾನ್ ಸಾಬ್ ಕೆರಿಮತ್ತಿಹಳ್ಳಿ (70), ಮೆಹಬೂಬ್ ಸಾಬ್ ದೊಡ್ಡಗುಬ್ಬಿ (65) ಹಾಗೂ ನಿಂಗಮ್ಮ ಜಿಗಳೇರ್ (70) ಮೃತಪಟ್ಟವರು.
ಅಪಘಾತದಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ರಾಣೆಬೆನ್ನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಹಾಗೂ ಗಾಯಾಳುಗಳು ಸಂಬಂಧಿಕರೊಬ್ಬರ ಮದುವೆಯ ಮೆರವಣಿಗೆಗಾಗಿ ಟಾಟಾ ಏಸ್ ವಾಹನದಲ್ಲಿ ತೆರಳಿದ್ದರು. ಮೆರವಣಿಗೆ ಮುಗಿಸಿ ತಮ್ಮೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story







