ನೀರಲಗಿ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ: ಶಾಲಾ ಆವರಣದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಹಾವೇರಿ: ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿನ ನೀರಲಗಿ ಗ್ರಾಮದಲ್ಲಿ ಗ್ರಾಮಸ್ಥರು ಶಾಲಾ ಆವರಣದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಶಾಲಾ ಆವರಣದಲ್ಲಿ ಭಜನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಶಾಲೆಗೆ ಅಗತ್ಯ ಕೊಠಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಸುಮಾರು 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕೇವಲ ಮೂರು ಕೊಠಡಿಗಳಲ್ಲೇ ಎಲ್ಲಾ ತರಗತಿಯ ಮಕ್ಕಳನ್ನು ಒಟ್ಟಿಗೆ ಸೇರಿಸಿ ಮಿಶ್ರ ತರಗತಿಗಳ ಮೂಲಕ ಪಾಠ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲೆಯ ಒಟ್ಟು ಎಂಟು ಕೊಠಡಿಗಳ ಪೈಕಿ ನಾಲ್ಕು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಉಳಿದ ಕೆಲವೇ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯ ಕೊಠಡಿಗಳ ಸಮಸ್ಯೆಯನ್ನು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.




