HAVERI | ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಜೀವಂತ: ಕಾರ್ಮಿಕರನ್ನು ಶೌಚ ಗುಂಡಿಗಿಳಿಸಿ ಸ್ವಚ್ಛತೆ

ಹಾವೇರಿ: ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಜಿಲ್ಲೆಯ ಹಾನಗಲ್ಲ ತಾಲೂಕಿನ ಕೂಸನೂರು ಗ್ರಾಮದಲ್ಲಿ ಇಬ್ಬರು ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದಿದೆ.
ಕೂಸನೂರ ಗ್ರಾಮದ ಸುರೇಶ ಪೂಜಾರ ಹಾಗೂ ಬಸವರಾಜ ಪೂಜಾರ ಎಂಬವರು ಈ ದುಷ್ಕೃತ್ಯ ಮಾಡಿಸಿದ ಆರೋಪಿಗಳಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಸ್ವಚ್ಛಗೊಳಿಸದ ಶೌಚಾಲಯದ ಮಲಗುಂಡಿಯನ್ನು ಹೀರೆಕೆರೂರ ತಾಲೂಕಿನ ಸಾತೇನಹಳ್ಳಿ ಗ್ರಾಮದಿಂದ ಪರಿಶಿಷ್ಠ ಜಾತಿಗೆ ಸೇರಿದ ಇಬ್ಬರು ಕೂಲಿ ಕಾರ್ಮಿಕರನ್ನ ಕರೆಸಿ ಸ್ವಚ್ಛತೆ ಮಾಡಿಸಿದ್ದಾರೆ, ಜಾಸ್ತಿ ಕೂಲಿ ನೀಡುವ ಆಮಿಷವೊಡ್ಡಿ ಮಂಗಳವಾರ ಮಧ್ಯಾಹ್ನ ಶೌಚಾಲಯದ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಯಾವುದೇ ಪರಿಕರ, ಯಂತ್ರೋಪಕರಣವಿಲ್ಲದೇ ಸ್ವಚ್ಛ ಮಾಡಿಸಿದ್ದಾರೆ.
ಇಬ್ಬರು ಕಾರ್ಮಿಕರು ಶೌಚ ಗುಂಡಿಯಿಂದ ಮಲವನ್ನು ಎತ್ತಿ ಸ್ವಚ್ಛಗೊಳಿಸುತ್ತಿರುವುದನ್ನು ಯಾರೋ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಈ ವಿಷಯ ಅರಿತ ಕೂಸನೂರ ಗ್ರಾಪಂ ಪಿಡಿಒ ಆಡೂರ ಪೊಲೀಸ್ ಠಾಣಗೆ ದೂರು ನೀಡಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಆಡೂರ ಠಾಣೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ರೇಣುಕಾ ಎಸ್. ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.







