ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ: ವಿಜಯೇಂದ್ರ

PC: x.com/BYVijayendra
ಹಾವೇರಿ: ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಇಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಕೊಲೆಗಳಾಗುತ್ತಿವೆ. ರಾಜ್ಯ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಮತೀಯ ಶಕ್ತಿಗಳಿಗೆ ಕರ್ನಾಟಕವು ಸ್ವರ್ಗದಂತಾಗಿದೆ. ಏನೇ ದೌರ್ಜನ್ಯ- ಕೊಲೆ ಮಾಡಿದರೂ ತಮ್ಮ ರಕ್ಷಣೆಗೆ ಕಾಂಗ್ರೆಸ್ ಸರಕಾರ ಬರುತ್ತದೆ ಎಂಬ ಧೈರ್ಯ ಮತೀಯ ಶಕ್ತಿಗಳಿಗೆ ಬಂದ ಪರಿಣಾಮವಾಗಿ ದಿನೇದಿನೇ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.
ಹಾವೇರಿಯಲ್ಲಿ ಹೋರಿ ಬೆದರಿಸುವ ಹಬ್ಬದಲ್ಲಿ ಪಟಾಕಿ ಸಿಡಿಸಿದರೆಂಬ ಕಾರಣಕ್ಕೆ ಲೋಹಿತ್ ಕುರುಬರ ಮತ್ತು ಅವರ ಮಿತ್ರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೈಯನ್ನೇ ಕಡಿದು ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ರಟ್ಟೆಹಳ್ಳಿಯಲ್ಲಿ ಶಿವಾಜಿ ರಾವ್ ಅವರ ಬರ್ಬರ ಹತ್ಯೆ ಆಗಿದೆ ಎಂದು ವಿವರಿಸಿದರು. ಕೊಪ್ಪಳ, ಯಲ್ಲಾಪುರದಲ್ಲಿ ಇಂಥದ್ದೇ ಘಟನೆಗಳು ನಡೆದಿವೆ. ಸರಕಾರ ಸಂತ್ರಸ್ತರ ಮೇಲೆಯೇ ಕೇಸು ದಾಖಲಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಸ್.ಐ.ಆರ್ ಸವಾಲಾಗಿ ಸ್ವೀಕಾರ
ಎಸ್.ಐ.ಆರ್ ಅನ್ನು ನಮ್ಮ ಎಲ್ಲ ಕಾರ್ಯಕರ್ತರು ಸವಾಲಾಗಿ ಸ್ವೀಕಾರ ಮಾಡಿದ್ದಾರೆ. ರಾಜ್ಯ ಸರಕಾರದ ಷಡ್ಯಂತ್ರ, ಕುತಂತ್ರದ ನಡುವೆಯೂ ನಮ್ಮ ಕಾರ್ಯಕರ್ತರು ಕಾರ್ಯಕರ್ತರು ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದಾರೆ. ಇದರ ನಡುವೆ ಸರಕಾರವು ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಕೊಡಲು ಮುಂದಾಗಿರುವುದು ಖಂಡನಾರ್ಹ ಎಂದರು.
ರೈತರ ವಿಚಾರದಲ್ಲಿ ಅಸಡ್ಡೆ
ಕಾಂಗ್ರೆಸ್ ಸರಕಾರಕ್ಕೆ ರೈತರ ಬಗ್ಗೆ ಅಸಡ್ಡೆ ಇದೆ. ಹೊಸಪೇಟೆ ತುಂಗಭದ್ರಾ ಡ್ಯಾಮಿನ ಕ್ರಸ್ಟ್ಗೇಟ್ ದುರಸ್ತಿ ಮಾಡಿಸಲು 24 ತಿಂಗಳು ಬೇಕಾಯಿತು ಎಂದು ಆಕ್ಷೇಪಿಸಿದರು. ಆದರೆ, ಮುಖ್ಯಮಂತ್ರಿ ಆದ ತಕ್ಷಣ ಬಿಡದಿಯಲ್ಲಿ ರೈತರ ಜಮೀನು ಕಸಿಯುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.
ನಾಳೆ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ಸರಕಾರದ ರೈತ ವಿರೋಧಿ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರಕಟಿಸಿದರು.
ತುಮಕೂರಿನ ಸುತ್ತ ವಿಮಾನ ನಿಲ್ದಾಣಕ್ಕೆ ಸಲಹೆ
ಕರ್ನಾಟಕದ ಎರಡನೇ ವಿಮಾನ ನಿಲ್ದಾಣವನ್ನೂ ಕನಕಪುರಕ್ಕೆ ತೆಗೆದುಕೊಂಡು ಹೊರಟಿದ್ದಾರೆ. ಈ ಸಂಬಂಧ ಸಿಎಂಗೆ ಪತ್ರ ಬರೆಯುತ್ತೇನೆ. ತುಮಕೂರು ಆಸುಪಾಸಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದರೆ ಮಧ್ಯ- ಉತ್ತರ ಕರ್ನಾಟಕಕ್ಕೂ ಅದರಿಂದ ಲಾಭ ಆಗಲಿದೆ. ಸರಕಾರಿ ಜಮೀನೇ ಸಿದ್ಧವಿದೆ. ಮುಖ್ಯಮಂತ್ರಿ ರಿಯಲ್ ಎಸ್ಟೇಟ್ ದಂಧೆಗೋಸ್ಕರ ವಿಮಾನ ನಿಲ್ದಾಣವನ್ನೂ ಕನಕಪುರಕ್ಕೆ ತೆಗೆದುಕೊಂಡು ಹೋಗುವುದು ಅಕ್ಷಮ್ಯ ಅಪರಾಧ ಎಂದರು.
ರೈತರ ಸಂಕಷ್ಟಕ್ಕೆ ಧಾವಿಸಿ
ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರಕಾರ ಅವರ ನೆರವಿಗೆ ಬರಬೇಕು ರಾಜ್ಯದಲ್ಲಿ ಇನ್ನೂ ಕೃಷಿ ಸಚಿವರು ಇಲ್ಲದಿರುವುದು ದುರಂತ ಎಂದು ಆಕ್ಷೇಪಿಸಿದ ವಿಜಯೇಂದ್ರ, ಕೇವಲ ಬೆಂಗಳೂರಿನಲ್ಲಿ ಎ.ಸಿ. ಕೊಠಡಿಯಲ್ಲಿ ಕುಳಿತು ವರದಿ ತರಿಸಿ ಪ್ರಧಾನಮಂತ್ರಿಗೆ ಪತ್ರ ಬರೆದರೆ ಸಾಕಾಗದು ಮುಖ್ಯಮಂತ್ರಿಗಳೇ.. ತಮ್ಮ ಸಚಿವರನ್ನು ಜಿಲ್ಲೆಗಳಿಗೆ ಕಳಿಸಿ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ರಾಜ್ಯ ಸರಕಾರದ ಪರಿಹಾರ ಕುರಿತು ಆಲೋಚಿಸಿ ಎಂದು ಒತ್ತಾಯಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಬಿಡದಿಯಲ್ಲಿ ರೈತರ ನೆಮ್ಮದಿ ಕೆಡಿಸುವ ಕೆಲಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ ಎಂದು ದೂರಿದರು. ಅಲ್ಲಿ ಸಮಿತಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು. ರೈತಪರ ನಿರ್ಧಾರ ಪ್ರಕಟಿಸಿ ಎಂದು ಆಗ್ರಹಿಸಿದರು.






