ಉತ್ತರ ಕರ್ನಾಟಕದಲ್ಲಿ ಕರಾವಳಿ ಕನ್ನಡಿಗರ ಸೇವೆ ಶ್ಲಾಘನೀಯ : ಸಚಿವ ರುದ್ರಪ್ಪ ಲಮಾಣಿ
'ಅಕ್ಷರೋತ್ಸವ' ಶಿಕ್ಷಣ ಸಮಾವೇಶ

ಹಾವೇರಿ : ಮಂಗಳೂರು ಸೇರಿದಂತೆ ಕರಾವಳಿ ಕನ್ನಡಿಗರು ಸುಶಿಕ್ಷಿತರು ಮತ್ತು ಬುದ್ಧಿವಂತರು. ಗಲ್ಫ್ ರಾಷ್ಟ್ರಗಳು ಮತ್ತಿತರ ವಿದೇಶಗಳಿಗೆ ತೆರಳಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಅದೇ ಮಂಗಳೂರಿನಿಂದ ತಮ್ಮದೇ ರಾಜ್ಯದ ಉತ್ತರ ಭಾಗಕ್ಕೆ ಬಂದು ಇಲ್ಲಿ ಶಾಲಾ-ಕಾಲೇಜುಗಳನ್ನು ನಿರ್ವಹಿಸಿ ಶಿಕ್ಷಣ ಚಳವಳಿ ನಡೆಸುತ್ತಿರುವ ಮುಈನುಸ್ಸುನ್ನಾ ವಿದ್ಯಾ ಸಂಸ್ಥೆಯ ಪ್ರವರ್ತಕರ ಸೇವೆ ಅತ್ಯಂತ ಶ್ಲಾಘನೀಯ ಎಂದು ಸಕ್ಕರೆ, ಜವಳಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯವರು ಹೇಳಿದರು.
ಸಂಸ್ಥೆಯು ನಿರ್ವಹಿಸುತ್ತಿರುವ ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಗಮಿಸಿದ 'ಅಕ್ಷರೋತ್ಸವ' ಶಿಕ್ಷಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಗಳೂರು ಯೆನಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ವೈ.ಅಬ್ದುಲ್ಲ ಕುಂಞಿ ಹಾಜಿಯವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಪ್ರಗತಿಗಾಗಿ, ವಿಶೇಷತಃ ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುತ್ತಿರುವ ಮುಈನುಸ್ಸುನ್ನಾ ಸಂಸ್ಥೆಯ ಸಾರಥಿಗಳನ್ನು ಅಭಿನಂದಿಸಿದರು. ಇದೇ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ನಈಮಿಯವರು ಬರೆದ 'ಬದುಕು ಬೆಳಗಿಸಲು' ಪುಸ್ತಕವನ್ನು ಅವರು ಬಿಡುಗಡೆಗೊಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಪೊಸೋಟ್ ಅವರು ಸಚಿವ ರುದ್ರಪ್ಪ ಲಮಾಣಿ ಹಾಗೂ ಡಾ.ವೈ.ಅಬ್ದುಲ್ಲ ಕುಂಞಿ ಹಾಜಿಯವರನ್ನು ಸನ್ಮಾನಿಸಿದರು.
ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಸಿ.ಆರ್ ನಸೀರ್ ಅಹ್ಮದ್ ದಾವಣಗೆರೆ ಉದ್ಘಾಟಿಸಿದರು.
ಕೆ.ಎಂ ಮುಸ್ತಫಾ ನಈಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಾ.ಎಸ್.ಎಂ. ರಶೀದ್ ಹಾಜಿ ಮಂಗಳೂರು, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ ಮಾತನಾಡಿದರು. ಸಂಚಾಲಕ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಸ್ವಾಗತಿಸಿದರು.
ಇದಕ್ಕೂ ಮುನ್ನ ನಡೆದ ವಿದ್ಯಾರ್ಥಿ ಸಮಾವೇಶವನ್ನು ಕೋಶಾಧಿಕಾರಿ ಡಾ.ಶೇಖ್ ಬಾವ ಹಾಜಿ ಮಂಗಳೂರು ಅಧ್ಯಕ್ಷತೆಯಲ್ಲಿ ಶಿಕ್ಷಣ ಪ್ರೇರಣಾ ಉಪನ್ಯಾಸಕ ನಝೀರ್ ಅಲ್ ಫಲಾಹ್ ಜುಬೈಲ್ ಉದ್ಘಾಟಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ್ ಕುಲಕರ್ಣಿ, ಉಪನ್ಯಾಸಕ ಇರ್ಶಾದ್ ಮೈಸೂರು ಮಾತನಾಡಿದರು.
ಸನದುದಾನ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಪದವಿ ಪ್ರದಾನ ಮಾಡಿದರು. ಶಾಸಕ ಯಾಸಿರ್ ಖಾನ್ ಪಠಾಣ್, ಮೌಲಾನಾ ಅಬ್ದುಲ್ ಸಲಾಂ ಮಿಸ್ಬಾಹಿ, ಮೌಲಾನಾ ಶಬೀರ್ ಮಿಸ್ಬಾಹಿ, ಬಿ.ಎ ಇಬ್ರಾಹೀಂ ಸಖಾಫಿ ಮತ್ತಿತರರು ಮಾತನಾಡಿದರು.
.






