ಕ್ವಾರಿ ಪರವಾನಿಗೆ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಹಾವೇರಿ, ಸೆ.18: ಕಲ್ಲು ಕ್ವಾರಿ ಪರವಾನಿ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಸಕ್ಕರೆ– ಜವಳಿ ಖಾತೆ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಾಗೂ ಕ್ವಾರಿ ಮಾಲಕ ರುದ್ರಪ್ಪ ಲಮಾಣಿಯವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂರು ಕೋಟಿ ರೂ. ದಂಡ ವಿಧಿಸಿದೆ.
ರಾಣಿಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿಯಿರುವ ಸಚಿವ ರುದ್ರಪ್ಪ ಲಮಾಣಿಯವರ ಕಲ್ಲು ಕ್ವಾರಿಗೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ. ನಿಗದಿಪಡಿಸಿದ ಪರವಾನಿಗೆ ವ್ಯಾಪ್ತಿಯನ್ನು ಮೀರಿ ಹೆಚ್ಚುವರಿಯಾಗಿ ಕಲ್ಲು ತೆಗೆದಿರುವುದು ಹಾಗೂ ಕ್ವಾರಿ ಸುತ್ತಮುತ್ತಲಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಿರುವುದು ನಿಯಮ ಉಲ್ಲಂಘನೆ ಎಂದು ಇಲಾಖೆಯ ನೋಟಿಸ್ನಲ್ಲಿ ಉಲ್ಲೇಖಿಸಿದೆ.
ಡ್ರೋನ್ ಮೂಲಕ ಸಮೀಕ್ಷೆ
ಕಲ್ಲು ಕ್ವಾರಿ ಪ್ರದೇಶಗಳಲ್ಲಿ ಪರವಾನಿಗೆ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ (KSRSAC) ಮೂಲಕ ಡ್ರೋನ್ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ನಿಗದಿತ ವ್ಯಾಪ್ತಿಯನ್ನು ಮೀರಿ ಗಣಿಗಾರಿಕೆ ನಡೆಸಿರುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ ಎನ್ನಲಾಗಿದೆ.
ಈ ಸಮೀಕ್ಷೆಯ ಆಧಾರದ ಮೇಲೆ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿದೆ. ಈ ಪಟ್ಟಿಯಲ್ಲಿ ಸಚಿವ ರುದ್ರಪ್ಪ ಲಮಾಣಿಯವರ ಕ್ವಾರಿಯೂ ಸೇರಿದೆ.
ಮೂರು ಕಂತುಗಳಲ್ಲಿ ಪಾವತಿ
ಮೂರು ಕೋಟಿ ರೂ. ದಂಡದ ಮೊತ್ತವನ್ನು ಪಾವತಿಸುವಂತೆ ಸಚಿವ ರುದ್ರಪ್ಪ ಲಮಾಣಿಯವರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ದಂಡ ಪಾವತಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮೂರು ಕಂತುಗಳಲ್ಲಿ ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಕ್ರಷರ್ಸ್ ಹಾಗೂ ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಬೆಳವಡಿ, ಸಚಿವ ರುದ್ರಪ್ಪ ಲಮಾಣಿ ಅವರಿಗೂ 3 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಇದು ತಪ್ಪು. ಸರಕಾರಕ್ಕೆ ರಾಜ್ಯದ ಕ್ವಾರಿಗಳಿಂದ 8 ಸಾವಿರ ಕೋಟಿ ರಾಜಸ್ವ ಭರಿಸಬೇಕಿತ್ತು. ಆದರೆ, ಗುತ್ತಿಗೆದಾರರು ಸೇರಿದಂತೆ ವಿವಿಧ ಕಾಮಗಾರಿ ನಿರ್ವಹಿಸುವವರು ಸರಕಾರಕ್ಕೆ 16 ಸಾವಿರ ಕೋಟಿ ರೂ. ರಾಯಲ್ಟಿ ಕಟ್ಟಿದ್ದಾರೆ. ಅಲ್ಲದೆ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಸರ್ಕಾರ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವ ಮೊದಲೇ ಸರ್ಕಾರದ ಇಲಾಖೆಗಳೇ ಅಲ್ಲಿ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿವೆ. ನಾವು ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿಲ್ಲ ಎಂದೂ ಬಸವರಾಜ ಬೆಳವಡಿ ತಿಳಿಸಿದ್ದಾರೆ. ಅಲ್ಲದೆ ದಂಡ ವಿಧಿಸಿರುವುದನ್ನು ಖಂಡಿಸಿ ಕ್ವಾರಿ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.






