ರಟ್ಟಿಹಳ್ಳಿ: ಬಿ.ಐ.ಇ. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಸಮಾರಂಭ

ರಟ್ಟಿಹಳ್ಳಿ: "ಜ್ಞಾನ ಗಳಿಸುವವರನ್ನು ದೇವರು ಅತ್ಯಂತ ಮೆಚ್ಚುತ್ತಾನೆ. ಮನುಷ್ಯನು ತನ್ನನ್ನು ಮತ್ತು ತನ್ನ ಸೃಷ್ಟಿಕರ್ತನನ್ನು ಸರಿಯಾಗಿ ಗುರುತಿಸಿ, ಅವನು ವಿಧಿಸಿದ ಹಕ್ಕು ಮತ್ತು ಕರ್ತವ್ಯಗಳನ್ನು ನಿಷ್ಠೆಯಿಂದ ಈಡೇರಿಸುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಿದೆ" ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಅವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಇಸ್ಲಾಮಿಕ್ ಸೆಂಟರ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಟ್ಟಿಹಳ್ಳಿ ಹಾಗೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಬಿ.ಐ.ಇ. ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, "ಇಂದಿನ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಆದರೆ ಮನುಷ್ಯನ ಈ ಭೌತಿಕ ಪ್ರಗತಿಯು ಅವನಿಗೆ ನೆಮ್ಮದಿ ಮತ್ತು ತೃಪ್ತಿಯನ್ನು ನೀಡುವ ಬದಲು ಆತಂಕ ಮತ್ತು ಸಂಕಷ್ಟಕ್ಕೆ ಕಾರಣವಾಗುತ್ತಿರುವುದು ವಿಷಾದನೀಯ. ನಿಜವಾದ ಮನಃಶಾಂತಿಯು ದೇವರ ಸ್ಮರಣೆ ಮತ್ತು ಅವನ ಆದೇಶಗಳಿಗೆ ವಿಧೇಯರಾಗಿರುವುದರಲ್ಲಿಯೇ ಅಡಗಿದೆ ಎಂಬ ಸತ್ಯವನ್ನು ಇಂದಿನ ಸಮಾಜವು ಅರ್ಥಮಾಡಿಕೊಳ್ಳಬೇಕಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್, ಹಾವೇರಿ ಜಿಲ್ಲಾ ಸಂಚಾಲಕರಾದ ಎಜಾಝ್ ಅಹ್ಮದ್ ಶಿರಹಟ್ಟಿ ಅವರು, "ಇಂದಿನ ನವಪೀಳಿಗೆಯು ಪುಸ್ತಕಗಳಿಂದ ದೂರವಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ಯುವಕ-ಯುವತಿಯರು ಉತ್ತಮ ಚಾರಿತ್ರ್ಯ ಮತ್ತು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದರು.
ಸಮಾರಂಭದಲ್ಲಿ ಬಿ.ಐ.ಇ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಇತ್ತೀಚೆಗೆ ಆಯ್ಕೆಯಾದ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ನೂತನ ಪದಾಧಿಕಾರಿಗಳಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರನ್ನು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜ.ಇ. ಹಿಂದ್ ಸ್ಥಳೀಯ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಜಾವಿದ್ ಅಹ್ಮದ್ ಗುಡಿಹಾಳ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.






