ಶಿಗ್ಗಾಂವಿ | ಗುತ್ತಿಗೆದಾರ ಶಿವಾನಂದ ಹತ್ಯೆ ಪ್ರಕರಣದ ಆರೋಪಿಯ ಮನೆಗೆ ಬೆಂಕಿ

ಹಾವೇರಿ : ಇಲ್ಲಿನ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ನಡೆದ ಗುತ್ತಿಗೆದಾರ ಶಿವಾನಂದ ಕುನ್ನೂರ ಅವರ ಹತ್ಯೆ ಬೆನ್ನಲ್ಲೇ ಪ್ರಕರಣದ ಆರೋಪಿಯೊಬ್ಬರ ಮನೆಗೆ ಬುಧವಾರ ರಾತ್ರಿ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.
ಆರೋಪಿ ನಾಗರಾಜ ಸವದತ್ತಿ ಎಂಬಾತನ ಮನೆಗೆ ಬೆಂಕಿ ಹಚ್ಚಲಾಗಿದೆ. ಗುತ್ತಿಗೆದಾರ ಶಿವಾನಂದ ಕಡೆಯವರೇ ಪ್ರತೀಕಾರವಾಗಿ ಬೆಂಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ನಾಗರಾಜ ಸವದತ್ತಿಯ ಶಿಗ್ಗಾಂವಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಯಾವುದೇ ತೊಂದರೆ ಆಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ :
ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು ಎಂಬವರನ್ನು ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಶಿವಾನಂದ ಅವರು ಹೊಟೇಲ್ನಲ್ಲಿ ಊಟ ಮಾಡಿ ನಂತರ ಕಾರಿನಲ್ಲಿ ತೆರಳುವ ವೇಳೆ 6 ರಿಂದ 7 ಜನರ ತಂಡ ಕಬ್ಬಿಣದ ರಾಡ್ ಮತ್ತು ತಲಾವಾರ್ ನಿಂದು ದಾಳಿ ನಡೆಸಿ ಕೊಲೆ ಮಾಡಿದ್ದರು.