ಹಾವೇರಿ| ಬಾಲಕನ ಗಾಯಕ್ಕೆ ಫೆವಿಕ್ವಿಕ್ ಹಾಕಿದ ನರ್ಸ್: ಆರೋಪ

ಹಾವೇರಿ: ಗಾಯಗೊಂಡು ಆಸ್ಪತ್ರೆಗೆ ಸೇರಿದ ಬಾಲಕನ ಗಾಯಕ್ಕೆ ನರ್ಸ್‌ವೊಬ್ಬರು ಫೆವಿಕ್ವಿಕ್ ಹಾಕಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕಳೆದ ಜನೆವರಿ 14 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುಕಿಶನ್ ಅಣ್ಣಪ್ಪ ಹೊಸಮನಿ (7 ವರ್ಷ) ಎಂಬ ಬಾಲಕ ಆಟವಾಡುವಾಗ ಕೆನ್ನೆ ಮೇಲೆ ಗಾಯ ಆಗಿದ್ದು, ರಕ್ತ ಸುರಿಯುತ್ತಿದ್ದ ಬಾಲಕನನ್ನು ಕುಟುಂಬಸ್ಥರು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು.
ವಿದ್ಯಾರ್ಥಿಯ ಗಾಯವನ್ನು ಪರೀಕ್ಷಿಸಿದ ನರ್ಸ್ ಜ್ಯೋತಿ ಎಂಬವರು ಗಾಯಕ್ಕೆ ಹೊಲಿಗೆ ಹಾಕದೆ, ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಫೆವಿಕ್ವಿಕ್ ಚಿಕಿತ್ಸೆಯನ್ನು ಕುಟುಂಬಸ್ಥರು ಪ್ರಶ್ನಿಸಿದಾಗ, ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ. ಹೊಲಿಗೆ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತಿತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿರುವುದಾಗಿ ಸಮರ್ಥನೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೊಬೈಲ್ ನಲ್ಲಿ ಬಾಲಕನ ಪೋಷಕರು ವಿಡಿಯೋ ಚಿತ್ರೀಕರಿಸಿದ್ದು, ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ಪಡೆದು ಕ್ರಮ ಜರುಗಿಸಲು DHO ರಾಜೇಶ್ ಸುರಗಿಹ ಅವರು ಮುಂದಾಗಿರುವುದಾಗಿ ಮೂಲಗಳು ಹೇಳಿವೆ.