ಬಡವರು, ದಲಿತರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾವೇರಿ: ಸಮಾವೇಶ ಮಾಡುವುದು ಸಾವಿರ ದಿನಾಚರಣೆಯ ಮೈಲಿಗಲ್ಲು ಮಾತ್ರವಲ್ಲ. ದೇಶದ ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ನಾವು ಮುಂದುವರಿಸುತ್ತಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದೆಯೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಹಾವೇರಿಯ ಸರ್ಕಾರಿ ಮೆಡಿಕಲ್ ಕಾಲೇಜು ಆವರಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ವಿರೋಧಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ ಏನೂ ಮಾಡಿಲ್ಲ. 2018ರಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ನಾವು ನೀಡಿದ್ದ 592 ಭರವಸೆಗಳಲ್ಲಿ 243 ಭರವಸೆಗಳನ್ನು ಎರಡೂವರೆ ವರ್ಷಗಳಲ್ಲಿ ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನೂ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಸರ್ಕಾರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿರುವುದು ಸುಳ್ಳು ಆರೋಪ ಎಂದರು.
ಅಧಿಕಾರ ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು ಹೇಳಿದಂತೆ ಎಲ್ಲರೂ ನಡೆದುಕೊಳ್ಳಬೇಕು. ಈ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ, ಪದೇ ಪದೇ ಇದೇ ಪ್ರಶ್ನೆ ಕೇಳಬೇಡಿ,” ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಮೇಲೆ ನಂಬಿಕೆ ಇಲ್ಲ :
ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ತೀರ್ಮಾನ ಕೈಗೊಳ್ಳುವುದು ಅವರ ಕೈಯಲ್ಲಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ವಿಷಯದಲ್ಲಿ ತೀರ್ಮಾನ ಕೈಗೊಳ್ಳುತ್ತಿಲ್ಲ. ಆದ್ದರಿಂದ ಅವರ ಮೇಲೆ ನಮಗೆ ಭರವಸೆ ಅಥವಾ ನಂಬಿಕೆ ಇಲ್ಲ ಎಂದು ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದ್ದು, ಅದರ ಆಧಾರದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಸಮಾಜಿಕ , ಶೈಕ್ಷಣಿಕ ಸಮೀಕ್ಷೆಯ ವರದಿ ಶೀಘ್ರದಲ್ಲಿಯೇ ಸಲ್ಲಿಕೆಯಾಗಲಿದ್ದು, ಅದರ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.







