ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿರುವುದು ಅಪಾಯಕಾರಿ; ಏನು ಮಾಡಬಹುದು?

ಸಾಂದರ್ಭಿಕ ಚಿತ್ರ | Photo Credit : freepik
ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ.
ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಯಾವುದೇ ತೀವ್ರತರವಾದ ಚಿಹ್ನೆಗಳನ್ನು ಹೊಂದಿರುವುದಿಲ್ಲ. ಆದರೆ ಅದು ಮೌನವಾಗಿ ದೇಹಕ್ಕೆ ಸಮಸ್ಯೆ ಒಡ್ಡಬಹುದು. ಬಹಳಷ್ಟು ಮಂದಿಗೆ ಹೃದಯ, ಮೆದುಳು, ಕಿಡ್ನಿ ಮತ್ತು ಕಣ್ಣುಗಳು ಒತ್ತಡದಲ್ಲಿರುವುದು ಗೊತ್ತಿಲ್ಲದೆಯೇ ಆರಾಮವಾಗಿರುತ್ತಾರೆ. ತಜ್ಞರು ಹೇಳುವ ಪ್ರಕಾರ, “ಚಿಕಿತ್ಸೆ ಪಡೆಯದೆ ಇದ್ದರೆ ರಕ್ತದೊತ್ತಡದ ಸಮಸ್ಯೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಬಹಳಷ್ಟು ಮಂದಿ ಅಧಿಕ ರಕ್ತದೊತ್ತಡವಿದ್ದೂ ಸಾಮಾನ್ಯರಂತೆ ಇರುತ್ತಾರೆ. ಆದರೆ ಆಂತರಿಕವಾಗಿ ಪ್ರಮುಖ ಅಂಗಗಳು ನಿಧಾನವಾಗಿ ಹಾನಿಗೊಳಗಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ.”
ಅಧಿಕ ರಕ್ತದೊತ್ತಡವನ್ನು ತಡವಾಗಿ ರೋಗಪರಿಶೀಲನೆ ಮಾಡಿದರೆ ಬಹುದೊಡ್ಡ ಸಮಸ್ಯೆ ಉಂಟಾಗಬಹುದು. ತಲೆನೋವು, ಸುಸ್ತು ಅಥವಾ ಹೃದಯ ಬಡಿತ ವೇಗವಾಗುವುದು ಮೊದಲಾದ ಸಮಸ್ಯೆಗಳು ಕಂಡುಬರಬಹುದು. ಇಂತಹ ಸಮಸ್ಯೆಗಳನ್ನು ಕಾರ್ಯದೊತ್ತಡವೆಂದು ಬದಿಗೆ ಸರಿಸಿ ಬಿಡುವುದೇ ಹೆಚ್ಚು. ಅದೇ ಕಾರಣಕ್ಕಾಗಿ 30 ಅಥವಾ 35 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುತ್ತಿರಬೇಕು.
ರಕ್ತದೊತ್ತಡ ದೇಹಕ್ಕೆ ಹೇಗೆ ಸಮಸ್ಯೆ ಒಡ್ಡುತ್ತದೆ?
ಅನಿಯಂತ್ರಿತ ಅಧಿಕ ರಕ್ತದೊತ್ತಡ ಪ್ರತಿ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರುತ್ತದೆ. ಹೃದಯದ ಮೇಲೆ ಹೆಚ್ಚು ರಕ್ತವನ್ನು ಪಂಪ್ ಮಾಡುವಂತೆ ಒತ್ತಡ ಹೆಚ್ಚಾಗುತ್ತದೆ. ಆರಂಭದಲ್ಲಿ ಹೃದಯ ಹಿಗ್ಗಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಒತ್ತಡ ನಿಯಂತ್ರಣಕ್ಕೆ ತರದೆ ಇದ್ದಲ್ಲಿ ಅದು ದುರ್ಬಲಗೊಳ್ಳಬಹುದು ಮತ್ತು ಕಾರ್ಯಕ್ಷಮತೆ ಕಡಿಮೆಯಾಗಬಹುದು.
ಅಪಾಯದಲ್ಲಿರುವ ಮತ್ತೊಂದು ಅಂಗವೆಂದರೆ ಮೆದುಳು. ಅಧಿಕ ರಕ್ತದೊತ್ತಡವು ಮೆದುಳಿಗೆ ರಕ್ತ ಹರಿಸುವ ನಾಳಗಳನ್ನು ಹಾನಿಗೊಳಿಸಬಹುದು. ಹೀಗಾಗಿ ಪಾರ್ಶ್ವವಾಯುವಿನ ಸಾಧ್ಯತೆ ಹೆಚ್ಚಿರುತ್ತದೆ. ದೀರ್ಘಕಾಲ ಅಧಿಕ ರಕ್ತದೊತ್ತಡವನ್ನು ಪರಿಶೀಲಿಸದೆ ಇದ್ದಲ್ಲಿ ನೆನಪುಶಕ್ತಿ ಮತ್ತು ಅರಿವಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಈ ಬದಲಾವಣೆಗಳು ನಿಧಾನಗತಿಯಲ್ಲಿ ಆಗಬಹುದು. ಅದೇ ಕಾರಣದಿಂದ ಜನರು ಅಂತಹ ಸಮಸ್ಯೆಗೆ ಅಧಿಕ ರಕ್ತದೊತ್ತಡ ಕಾರಣವೆಂದು ಹೇಳುವುದಿಲ್ಲ.
ಅಧಿಕ ರಕ್ತದೊತ್ತಡದಿಂದ ಕಿಡ್ನಿಗೆ ಹಾನಿ ನಿಧಾನವಾಗಿ ಮತ್ತು ಮೌನವಾಗಿ ಆಗುತ್ತದೆ. ದೇಹದಲ್ಲಿ ನಿಧಾನವಾಗಿ ಅದಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣು ಕೂಡ ಹಾನಿಗೊಳಗಾಗುತ್ತದೆ. ರೆಟಿನಾದಲ್ಲಿರುವ ದುರ್ಬಲ ರಕ್ತನಾಳಗಳು ದೃಷ್ಟಿಯನ್ನು ಮಂದಗೊಳಿಸಬಹುದು. ಈ ಬೆಳವಣಿಗೆಗಳು ನಿಧಾನವಾಗಿರುವ ಕಾರಣ ಪರಿಶೀಲಿಸದೆ ಇದ್ದಲ್ಲಿ ಶಾಶ್ವತವಾಗಿ ಸಮಸ್ಯೆ ಕಂಡುಬರಬಹುದು.
ಅಪಾಯ ಗಂಭೀರವಾಗುವುದು ಯಾವಾಗ?
ಅಧಿಕ ರಕ್ತದೊತ್ತಡದ ಕೆಲವು ಮಟ್ಟಗಳು ಜೀವನಕ್ಕೆ ಬೆದರಿಕೆ ಒಡ್ಡಬಲ್ಲ ಸಮಸ್ಯೆ ಉಂಟುಮಾಡಬಹುದು. 140/90 mmHg ರೀಡಿಂಗ್ಗಳು ಅಪಾಯಕಾರಿ. ಈ ರೀಡಿಂಗ್ ಹೆಚ್ಚಾಗಿ ಅಧಿಕ ರಕ್ತದೊತ್ತಡ 160/100 ವರೆಗೆ ತಲುಪಬಹುದು. ಅಲ್ಪ ಪ್ರಮಾಣದಲ್ಲಿ ಅಧಿಕ ರಕ್ತದೊತ್ತಡವೂ ಕಿಡ್ನಿ, ಹೃದಯ ಮತ್ತು ಮೆದುಳಿಗೆ ಅಪಾಯಕಾರಿ. “ತಮ್ಮ ಆರೋಗ್ಯ ಸರಿಯಿದೆ ಎಂದುಕೊಂಡವರು ಅನಿರೀಕ್ಷಿತ ಹೃದಯಾಘಾತ ಅಥವಾ ಪಾರ್ಶ್ವವಾಯುಗಳನ್ನು ಕಾಣುತ್ತೇವೆ. ನಿಯಮಿತ ಔಷಧಿಗಳು, ಜೀವನಶೈಲಿಯ ಬದಲಾವಣೆಗಳೊಂದಿಗೆ ಈ ಅಪಾಯವನ್ನು ಕಡಿಮೆ ಮಾಡಬಹುದು” ಎನ್ನುತ್ತಾರೆ ತಜ್ಞರು.
ಜೀವನಶೈಲಿ ಬದಲಾವಣೆ ಸಾಕೆ?
ತಜ್ಞರು ಹೇಳುವ ಪ್ರಕಾರ ಧೂಮಪಾನ ತೊರೆಯುವುದು, ಉಪ್ಪು ಕಡಿಮೆ ಸೇವಿಸುವುದು, ಎಣ್ಣೆ ಮತ್ತು ಸಂಸ್ಕರಿತ ಆಹಾರವನ್ನು ಕಡಿಮೆ ಮಾಡುವುದು, ನಿಯಮಿತವಾಗಿ ದೈಹಿಕ ಚಟುವಟಿಕೆಯಿಂದ ಅಪಾಯವನ್ನು ಕಡಿಮೆ ಮಾಡಬಹುದು. ಉತ್ತಮ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಇವು ಅತಿಮುಖ್ಯ. ಆದರೆ ಜೀವನಶೈಲಿ ಬದಲಾವಣೆ ಮಾತ್ರ ಸಾಲದು. ಔಷಧಿ ಮತ್ತು ನಿಯಮಿತವಾಗಿ ಪರಿಶೀಲನೆ ಅಗತ್ಯವಿರುತ್ತದೆ. ವೃತ್ತಿ ಸಂಬಂಧಿತ ಒತ್ತಡ, ಶಿಸ್ತಿಲ್ಲದ ಆಹಾರ ಸೇವನೆ ಮತ್ತು ಸೋಮಾರಿತನದ ಅಭ್ಯಾಸಗಳಿದ್ದಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಬಹುದು. ಅದೇ ಕಾರಣಕ್ಕೆ ಯುವ ವೃತ್ತಿಪರರಲ್ಲಿ ಪಾರ್ಶ್ವವಾಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ ರೋಗ ಚಿಹ್ನೆಗಳಿಗೆ ಕಾಯಬೇಡಿ. ನಿಮ್ಮ ರಕ್ತದೊತ್ತಡವನ್ನು ನೀವೇ ಮೇಲ್ವಿಚಾರಣೆ ಮಾಡಿ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವುದು ಅಪಾಯದಿಂದ ಪಾರು ಮಾಡಬಹುದು. ಗಂಭೀರವಾಗಿ ತೆಗೆದುಕೊಂಡಲ್ಲಿ ಮಾತ್ರ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಬಹುದು.
ಕೃಪೆ: indianexpress.com







