ಸಾಮಾನ್ಯ ರಕ್ತ ಪರೀಕ್ಷೆಯಿಂದ ಇನ್ಸುಲಿನ್ ವಿವರ ಪತ್ತೆಯಾಗದು!

ಸಾಂದರ್ಭಿಕ ಚಿತ್ರ | Photo Credit : FREEPIK
ಪರಿಣತ ವೈದ್ಯರು ಸೂಚಿಸಿದಾಗ ಮಾತ್ರವೇ ಇನ್ಸುಲಿನ್ ಪ್ರತಿರೋಧದ ಪರಿಶೀಲನೆ ನಡೆಸಿದರೆ ಸಾಕು, ಸಾಮಾಜಿಕ ಮಾಧ್ಯಮಗಳ ಟ್ರೆಂಡ್ಗಳನ್ನು ಗಮನಿಸಿ ಪರೀಕ್ಷಿಸುವ ಅಗತ್ಯವಿಲ್ಲ.
ನಮ್ಮಲ್ಲಿ ಬಹುತೇಕರು ರಕ್ತ ಪರೀಕ್ಷೆಗಳನ್ನು ಸಂಪೂರ್ಣವಾಗಿ ನಂಬಿ ಬಿಡುತ್ತೇವೆ. ಆದರೆ ಇನ್ಸುಲಿನ್ ಪ್ರತಿರೋಧದಂತಹ ಚಯಾಪಚಯ ಪರಿಸ್ಥಿತಿ ನಿಜಕ್ಕೂ ಇದೆಯೆ ಎಂದು ಅರ್ಥಮಾಡಿಕೊಳ್ಳಲು ರಕ್ತಪರೀಕ್ಷೆಯ ವರದಿಯನ್ನು ಸರಿಯಾದ ಸಂದರ್ಭದಲ್ಲಿ ವಿಶ್ಲೇಷಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಸೆಂಟ್ರಲ್ನ ವಾಕ್ಹಾರ್ಡ್ಟ್ ಹಾಸ್ಪಿಟಲ್ಸ್ನಲ್ಲಿ ಅಂತಃಸ್ರಾವಶಾಸ್ತ್ರಜ್ಞ (ಎಂಡೊಗ್ರೈನಲಾಜಿಸ್ಟ್) ಮತ್ತು ಮಧುಮೇಹ ತಜ್ಞರಾಗಿರುವ ಡಾ ಪ್ರಣವ್ ಘೋಡಿ ಹೇಳುವ ಪ್ರಕಾರ, ವರದಿಯಲ್ಲಿರುವ ಸಾಮಾನ್ಯ ಫಾಸ್ಟಿಂಗ್ ಗ್ಲುಕೋಸ್ ಪರೀಕ್ಷೆಯಿಂದ ವ್ಯಕ್ತಿ ಚಯಾಪಚಯದ ರೋಗಿ ಎಂದು ಕರೆಯಲು ಸಾಧ್ಯವಿಲ್ಲ.
“ರಕ್ತದಲ್ಲಿ ಸಕ್ಕರೆ ಪ್ರಮಾಣ ವರ್ಷಗಳ ಕಾಲ ಸಾಮಾನ್ಯವಾಗಿಯೇ ಇರಬಹುದು ಮತ್ತು ಇನ್ಸುಲಿನ್ ಪ್ರತಿರೋಧ ನಿಧಾನವಾಗಿ ಬೆಳೆಯುತ್ತದೆ. ಈ ರಕ್ತ ಪರೀಕ್ಷೆಗಳು ಉಪಯುಕ್ತವಾಗಿದ್ದರೂ, ಯಾವಾಗಲೂ ಪೂರ್ಣವೆಂದು ಭಾವಿಸಬೇಕಾಗಿಲ್ಲ” ಎನ್ನುತ್ತಾರೆ ಡಾ. ಪ್ರಣವ್ ಘೋಡಿ.
ಇನ್ಸುಲಿನ್ ಪ್ರತಿರೋಧ ಎಂದರೇನು? ಆರಂಭಿಕ ಘಟ್ಟದಲ್ಲಿ ಅದು ಏಕೆ ಕಂಡುಬರುವುದಿಲ್ಲ?
ದೇಹದ ಜೀವಕೋಶಗಳು ಇನ್ಸುಲಿನ್ಗೆ ಸರಿಯಾಗಿ ಪ್ರತಿಸ್ಪಂದಿಸದೆ ಇರುವಾಗ ಇನ್ಸುಲಿನ್ ಪ್ರತಿರೋಧ ಕಂಡುಬರುತ್ತದೆ. ಹೀಗಾದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಾಮಾನ್ಯವಾಗಿಡಲು ಹೆಚ್ಚು ಇನ್ಸುಲಿನ್ ಉತ್ಪತ್ತಿಸುವಂತೆ ಮೇದೋಜೀರಕ ಗ್ರಂಥಿಯ ಮೇಲೆ ಒತ್ತಡ ಬೀಳುತ್ತದೆ. ಮಧುಮೇಹ ಸ್ಪಷ್ಟವಾಗಿ ಕಾಣುವ ಮೊದಲು ಈ ಹಂತ 10-20 ವರ್ಷಗಳ ಕಾಲ ಮುಂದುವರಿಯಬಹುದು. ಈ ಹಂತದಲ್ಲಿ ಸಾಮಾನ್ಯ ರಕ್ತಪರೀಕ್ಷೆಗಳಲ್ಲಿ ಗ್ಲುಕೋಸ್ ಮಟ್ಟವು ಸರಿಯಾಗಿರುವಂತೆ ಕಂಡುಬರಬಹುದು ಎನ್ನುತ್ತಾರೆ ಡಾ ಘೋಡಿ.
ಗ್ಲುಕೋಸ್ ಮಟ್ಟ ಏರುವ ಮೊದಲು ಜನರ ಹೊಟ್ಟೆಯ ಸುತ್ತ ತೂಕ ಬೆಳೆದಿರಬಹುದು, ಲಿವರ್ ದಪ್ಪವಾಗಿರಬಹುದು, ಅಸಹಜವಾದ ಕೊಲೆಸ್ಟರಾಲ್ ಮಟ್ಟ ಇರಬಹುದು, ಅತಿ ರಕ್ತದೊತ್ತಡವಿರಬಹುದು ಅಥವಾ ಇನ್ಸುಲಿನ್ ಮಟ್ಟ ಏರಬಹುದು. ಗ್ಲುಕೋಸ್ ರೋಗಪರಿಶೀಲನೆಯ ಮಟ್ಟ ತಲುಪುವ ಮೊದಲು ಈ ಬದಲಾವಣೆಗಳು ಮಧುಮೇಹ ಮತ್ತು ಹೃದಯ ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಹಾಗಿದ್ದರೆ ಗ್ಲುಕೊಸ್ ಮಟ್ಟ ಅಪ್ರಸ್ತುತವೆ?
ವೈದ್ಯರ ಪ್ರಕಾರ ಅಪ್ರಸ್ತುತವಲ್ಲ, ಫಾಸ್ಟಿಂಗ್ ಗ್ಲುಕೋಸ್ ಒಂದು ಪ್ರಮುಖ ರೋಗಪರಿಶೀಲನೆಯ ಪರೀಕ್ಷೆಯಾಗಿರುತ್ತದೆ. ಆದರೆ ಅದೊಂದೇ ಚಯಾಪಚಯ ಆರೋಗ್ಯವನ್ನು ಗುರುತಿಸುವುದಿಲ್ಲ. ಕ್ಲಿನಿಕಲ್ ಫೀಚರ್ಗಳು, ಕುಟುಂಬದ ಇತಿಹಾಸ, ಸೊಂಟದ ದಪ್ಪ, ಲಿಪಿಡ್ ಪ್ರೊಫೈಲ್ ಮತ್ತು ಕೆಲವೊಮ್ಮೆ ಅಪಾಯವಿರುವಾಗ ಇತರ ಪರೀಕ್ಷೆಗಳನ್ನು ಮಾಡಿ ಪರಿಶೀಲಿಸಬೇಕಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುವ ಮೊದಲೇ ಸಮಸ್ಯೆ ಪತ್ತೆಮಾಡುವ ವಿಧಾನವಿದೆಯೆ?
ಕೆಲವರಿಗೆ HbA1c, ಫಾಸ್ಟಿಂಗ್ ಇನ್ಸುಲಿನ್, HOMA-IR, ಟ್ರೈಗ್ಲಿಸರೈಡ್ನಿಂದ HDL ಅನುಪಾತ, ಲಿವರ್ ಅಲ್ಟ್ರಾಸೌಂಡ್ ಫ್ಯಾಟಿ ಲಿವರ್ನಿಂದ ರೋಗಚಿಹ್ನೆಗಳನ್ನು ಗುರುತಿಸಬಹುದು. ಪ್ರತಿಯೊಬ್ಬರಿಗೂ ಇದು ಅಗತ್ಯವಿರುವುದಿಲ್ಲ. ಆದರೆ ಬೊಜ್ಜು ಇರುವವರು, ಮಧುಮೇಹದ ಕೌಟುಂಬಿಕ ಇತಿಹಾಸವಿದ್ದರೆ, ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಅಥವಾ ಆರಂಭಿಕ ಹಂತದ ಹೃದಯ ರೋಗವಿದ್ದವರಿಗೆ ಉಪಯುಕ್ತವೆನಿಸಲಿದೆ.
ಪ್ರತಿಯೊಬ್ಬರು ನಿಯಮಿತವಾಗಿ ಇನ್ಸುಲಿನ್ ಪರೀಕ್ಷೆ ಮಾಡಿಸಿಕೊಳ್ಳಬೇಕೆ?
ಅಗತ್ಯವಿಲ್ಲ ಎನ್ನುತ್ತಾರೆ ಡಾ ಘೊಡಿ. ನಮ್ಮ ರಕ್ತದಲ್ಲಿ ಇನ್ಸುಲಿನ್ ಮಟ್ಟ ಏರಿಳಿತವಾಗುತ್ತಲೇ ಇರುತ್ತದೆ. ಹೀಗಾಗಿ ಪರೀಕ್ಷೆ ಮಾಡುವುದರಿಂದ ಗೊಂದಲ ಮತ್ತು ಆತಂಕವಾಗಬಹುದು. ಪರಿಣತ ವೈದ್ಯರು ಸೂಚಿಸಿದಾಗ ಮಾತ್ರವೇ ಇನ್ಸುಲಿನ್ ಪ್ರತಿರೋಧದ ಪರಿಶೀಲನೆ ನಡೆಸಿದರೆ ಸಾಕು, ಸಾಮಾಜಿಕ ಮಾಧ್ಯಮಗಳ ಟ್ರೆಂಡ್ಗಳನ್ನು ಗಮನಿಸಿ ಪರೀಕ್ಷಿಸುವ ಅಗತ್ಯವಿಲ್ಲ.
“ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಮಾನ್ಯವಿದೆ ಎನ್ನುವ ಮಾತ್ರಕ್ಕೆ ಮಧುಮೇಹದಿಂದ ಜೀವನವಿಡೀ ರಕ್ಷಣೆಯೂ ಸಿಗುವುದಿಲ್ಲ. ನಿಯಮಿತವಾದ ಪರೀಕ್ಷೆಗಳು, ಆರೋಗ್ಯಕರ ತೂಕ, ಸಕ್ರಿಯವಾಗಿ ಇರುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆಯಿಂದ ಚಯಾಪಚಯ ರೋಗವನ್ನು ತಪ್ಪಿಸಬಹುದು” ಎನ್ನುತ್ತಾರೆ ವೈದ್ಯರು.
ಕೃಪೆ: indianexpress.com







