ರಕ್ತದಾನದ 24 ಗಂಟೆಗಳೊಳಗೆ ದೇಹದೊಳಗೆ ಏನು ಸಂಭವಿಸುತ್ತದೆ?; ಇಲ್ಲಿದೆ ವಿವರ…

ಸಾಂದರ್ಭಿಕ ಚಿತ್ರ | Photo Credit : freepik
ಆರೋಗ್ಯಕರ ವ್ಯಕ್ತಿಗಳಲ್ಲಿ ಬಹುತೇಕ ಪ್ಲಾಸ್ಮಾ ಪ್ರಮಾಣವು ರಕ್ತದಾನ ಮಾಡಿದ 24ರಿಂದ 48 ಗಂಟೆಗಳ ಒಳಗೆ ತುಂಬುತ್ತದೆ.
ರಕ್ತದಾನವು ಸೇವಾ ಮನೋಭಾವದಿಂದ ಮಾಡುವ ಉದಾತ್ತ ಕೆಲಸ. ಶಸ್ತ್ರಚಿಕಿತ್ಸೆಗಳು, ಅಪಘಾತಗಳು ಅಥವಾ ವೈದ್ಯಕೀಯ ಸ್ಥಿತಿಗಳ ಸಂದರ್ಭದಲ್ಲಿ ಅತ್ಯಗತ್ಯವಾಗಿರುತ್ತದೆ. ಆದರೆ ಮೊದಲ ಬಾರಿಗೆ ರಕ್ತದಾನ ಮಾಡಿದವರಲ್ಲಿ ಅನೇಕ ಸಂಶಯಗಳಿರುತ್ತವೆ. ಪ್ರಕ್ರಿಯೆ ಸುರಕ್ಷಿತವೇ ಅಥವಾ ದೇಹ ಅದಕ್ಕೆ ಹೊಂದಿಕೊಳ್ಳುತ್ತದೆಯೇ ಎಂಬ ಸಂಶಯ ಇರುತ್ತದೆ.
ರಕ್ತದಾನ ಮಾಡಿದ 24 ಗಂಟೆಗಳಲ್ಲಿ ದೇಹದಲ್ಲಿ ಯಾವ ಬದಲಾವಣೆಗಳು ಆಗುತ್ತವೆ ಎನ್ನುವ ಬಗ್ಗೆ ಕೈಲಾಶ್ ದೀಪ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ರಜತ್ ಕಾಂತ್ ಜೈನ್ ಅವರು ವಿವರ ನೀಡಿದ್ದಾರೆ. “ರಕ್ತದಾನವು ದೇಹ ಎಷ್ಟು ಬೇಗ ಹೊಂದಿಕೊಳ್ಳುತ್ತದೆ ಎನ್ನುವುದರ ಅತ್ಯುತ್ತಮ ಉದಾಹರಣೆ. ಗಂಟೆಗಳೊಳಗೆ ದೇಹವು ಕಳೆದುಕೊಂಡ ಫ್ಲೂಯಿಡ್ಗಳು ಮತ್ತು ಜೀವಕೋಶಗಳನ್ನು ಬದಲಿಸಲು ಆರಂಭಿಸುತ್ತದೆ. ಬಹಳ ಆರೋಗ್ಯವಂತ ದಾನಿಗಳು ಒಂದು ದಿನದೊಳಗೆ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ, ಅನೇಕ ದಾನಿಗಳಿಗೆ ಆರಂಭದಲ್ಲಿ ಸ್ವಲ್ಪ ಆಯಾಸ ಅಥವಾ ತಲೆತಿರುಗುವಂತೆ ಅನಿಸಿದರೂ ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವನೆ ಮತ್ತು ವಿಶ್ರಾಂತಿಯೊಂದಿಗೆ ಸಮಸ್ಯೆ ಪರಿಹಾರವಾಗುತ್ತದೆ.
ಪ್ಲಾಸ್ಮಾ ಮತ್ತು ರಕ್ತದ ಜೀವಕೋಶಗಳ ಮರುಪೂರಣ
ರಕ್ತದ ದ್ರವ ಅಂಶವಾಗಿರುವ ಪ್ಲಾಸ್ಮ ಆ ಬಹಳ ಬೇಗನೇ ಮರುಪೂರಣಗೊಳ್ಳುತ್ತದೆ. ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಮರುಪೂರಣವಾಗುತ್ತದೆ. ಆರೋಗ್ಯಕರ ವ್ಯಕ್ತಿಗಳಲ್ಲಿ ಬಹುತೇಕ ಪ್ಲಾಸ್ಮಾ ಪ್ರಮಾಣವು ರಕ್ತದಾನ ಮಾಡಿದ 24ರಿಂದ 48 ಗಂಟೆಗಳ ಒಳಗೆ ತುಂಬುತ್ತದೆ.
ಸುತ್ತಮುತ್ತಲಿನ ಅಂಗಾಂಶಗಳಿಂದ ಫ್ಲೂಯಿಡ್ಗಳು ರಕ್ತದ ಹರಿವಿಗೆ ಬರುವ ಕಾರಣ ರಕ್ತದ ಪ್ರಮಾಣವನ್ನು, ರಕ್ತಪರಿಚಲನೆ ಮತ್ತು ರಕ್ತದೊತ್ತಡವನ್ನು ಮರುಸ್ಥಾಪಿಸುತ್ತದೆ. ದುಗ್ಧರಸ (lymphatic) ವ್ಯವಸ್ಥೆಯು ಸಂಗ್ರಹಿತ ಫ್ಲೂಯಿಡ್ ಮತ್ತು ಪ್ರೊಟೀನ್ ಅನ್ನು ರಕ್ತಕ್ಕೆ ಮರಳಿಸುತ್ತದೆ. ಹಾರ್ಮೋನ್ಗಳು ಈ ಪ್ರಕ್ರಿಯೆಗೆ ಬೆಂಬಲಿಸುತ್ತವೆ. ಕಿಡ್ನಿ ನೀರನ್ನು ಸಂರಕ್ಷಿಸುತ್ತದೆ, ಮೆದುಳು ಬಾಯಾರಿಕೆಯನ್ನು ಉತ್ತೇಜಿಸುತ್ತದೆ, ಹಾಗೆ ದ್ರವ ಸೇವನೆ ಹೆಚ್ಚಾಗುತ್ತದೆ. ಲಿವರ್ ನಿಧಾನವಾಗಿ ಅಲ್ಬುಮಿನ್ನಂತಹ ಪ್ಲಾಸ್ಮಾ ಪ್ರೊಟೀನ್ಗಳನ್ನು ಮರುಪೂರಣಗೊಳಿಸುತ್ತದೆ. ಹೀಗೆ ಮರುಪೂರಣಗೊಳ್ಳಲು 24 ಗಂಟೆಗಳು ಹಿಡಿಯಬಹುದು.
ಪ್ಲಾಸ್ಮಾ ತ್ವರಿತವಾಗಿ ಚೇತರಿಸಿಕೊಂಡರೂ ಕೆಂಪು ರಕ್ತ ಕಣಗಳು ಪುನರ್ನಿರ್ಮಿಸಲು ಅನೇಕ ವಾರಗಳೇ ಹಿಡಿಯುತ್ತವೆ. ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತ ಕಣಗಳು ವೇಗವಾಗಿ ಪ್ರತಿಕ್ರಿಯಿಸುತ್ತವೆ. ಮೂಳೆ ಮಜ್ಜೆಯು (bone marrow) ಹೊಸ ಜೀವಕೋಶಗಳನ್ನು ತಕ್ಷಣವೇ ಉತ್ಪಾದಿಸಲು ಆರಂಭಿಸುತ್ತದೆ. ವಾರದೊಳಗೆ ಅವು ಮೂಲ ರೂಪಕ್ಕೆ ಮರಳುತ್ತವೆ. ಇದೇ ಕಾರಣದಿಂದ ದಾನಿಗಳು ಸುರಕ್ಷಿತವಾಗಿ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು.
ತಾತ್ಕಾಲಿಕ ಸುಸ್ತು ಮತ್ತು ತಲೆತಿರುಗುವಿಕೆ
ತಾತ್ಕಾಲಿಕವಾಗಿ ರಕ್ತದ ಪ್ರಮಾಣ ಕಡಿಮೆಯಾಗಿರುವುದು ಮತ್ತು ವಾಸೋವಾಗಲ್ ರಿಫ್ಲರಕ್ಸ್ನಿಂದಾಗಿ ಸುಸ್ತು ಮತ್ತು ತಲೆತಿರುಗುತ್ತದೆ. ವಾಸೋವಾಗಲ್ ಪ್ರತಿಕ್ರಿಯೆಯ ಸಂದರ್ಭದಲ್ಲಿ ವೇಗಸ್ ನರವು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತನಾಳವನ್ನು ವಿಸ್ತರಿಸುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ.
ಯುವಕರು, ಮೊದಲ ಬಾರಿ ರಕ್ತದಾನ ಮಾಡಿದವರು ಅಥವಾ ಗಾತ್ರದಲ್ಲಿ ಚಿಕ್ಕವರಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ನಿರ್ಜಲೀಕರಣ, ಆಹಾರ ಸೇವಿಸದೆ ಇರುವುದು, ನಿದ್ರೆಯ ಕೊರತೆಯಿಂದಲೂ ಹೀಗಾಗುತ್ತದೆ. ಸಾಮಾನ್ಯವಾಗಿ ಕಡಿಮೆ ರಕ್ತದೊತ್ತಡ ಇರುವವವರಲ್ಲಿ ಹೆಚ್ಚು ಕಂಡುಬರುತ್ತದೆ.ನೀರು ಕುಡಿಯುವುದು ಲಘು ಆಹಾರ ಸೇವನೆ ಮತ್ತು ವಿಶ್ರಾಂತಿಯಿಂದ ಈ ಲಕ್ಷಣಗಳು ಗುಣವಾಗುತ್ತವೆ.






