ಮೆದುಳಿನ ಆಘಾತ -ಜಾಗೃತಿ ಅಗತ್ಯ
ಇಂದು ವಿಶ್ವ ಸ್ಟ್ರೋಕ್ ದಿನ

ಪ್ರತೀ ವರ್ಷ ವಿಶ್ವದಾದ್ಯಂತ ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿವಸ ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಈ ಸ್ಟ್ರೋಕ್ ಎನ್ನುವುದು ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಹೊತ್ತಿನಲ್ಲಿ ಸಂಭವಿಸಬಹುದು. ಪ್ರತೀ ನಾಲ್ಕು ವಯಸ್ಕರಲ್ಲಿ ಒಬ್ಬರಿಗೆ ಜೀವನದಲ್ಲಿ ಒಮ್ಮೆಯಾದರೂ ಸ್ಟ್ರೋಕ್ ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. ಜಾಗತಿಕವಾಗಿ ಹೃದಯಾಘಾತದ ನಂತರ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಸ್ಟ್ರೋಕ್ ಎರಡನೇ ಸ್ಥಾನಗಳಿಸಿದೆ. ಆದರೆ ಒಂದು ಸಮಾಧಾನಕರ ಅಂಶ ಎಂದರೆ ಹೆಚ್ಚಿನ ಎಲ್ಲಾ ‘ಸ್ಟ್ರೋಕ್’ಗಳನ್ನು ತಡೆಗಟ್ಟಬಹುದಾಗಿದೆ. ಈ ಆಚರಣೆ 2006ರಲ್ಲಿ ಆರಂಭವಾಗಿದ್ದು, ವಿಶ್ವ ಸ್ಟ್ರೋಕ್ ಸಂಸ್ಥೆ ಈ ಆಚರಣೆಯನ್ನು ಜಾರಿಗೆ ತಂದಿದೆ. 2010ರಲ್ಲಿ ‘ಸ್ಟ್ರೋಕ್’ ರೋಗವನ್ನು ಜಾಗತಿಕ ಆರೋಗ್ಯ ತುರ್ತು ಸಮಸ್ಯೆ ಎಂದು ವಿಶ್ವ ಸ್ಟ್ರೋಕ್ ಸಂಸ್ಥೆ ಘೋಷಿಸಿದೆ. ಅಮೆರಿಕ ದೇಶವೊಂದರಲ್ಲಿಯೇ ವಾರ್ಷಿಕವಾಗಿ 8 ಲಕ್ಷ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ. ಇದಲ್ಲದೆ ಸ್ಟ್ರೋಕ್ ಬಂದ ಬಳಿಕ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಆ ವ್ಯಕ್ತಿ ಶಾಶ್ವತವಾಗಿ ಅಂಗವೈಕಲ್ಯ ಹೊಂದುತ್ತಾನೆ. ಜಾಗತಿಕವಾಗಿ ಸುಮಾರು 20 ಲಕ್ಷ ಮಂದಿ ವಾರ್ಷಿಕವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ ಎನ್ನಲಾಗಿದೆ. 2026ರ ಆಚರಣೆಯು ಧ್ಯೇಯ ವಾಕ್ಯ ‘ಪ್ರತೀ ನಿಮಿಷವೂ ಅತ್ಯಮೂಲ್ಯ’ ಎಂಬುದಾಗಿದೆ. ಆಂಗ್ಲ ಭಾಷೆಯಲ್ಲಿ ‘Every Minute Counts" ಎಂಬುದಾಗಿದೆ.
ಜಗತ್ತಿನಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗಿರುವ ಎರಡನೇ ಅತೀ ದೊಡ್ಡ ಕಾರಣ ಎಂದರೆ ಮೆದುಳಿಗೆ ಸಂಬಂಧಪಟ್ಟ ಸ್ಟ್ರೋಕ್ ಅಥವಾ ಮೆದುಳಿನ ಆಘಾತ. ಪ್ರತೀ ವರ್ಷ 15 ಮಿಲಿಯನ್ ಮಂದಿ ಸ್ಟ್ರೋಕ್ ಖಾಯಿಲೆಗೆ ತುತ್ತಾಗುತ್ತಾರೆ. ಇದರ ಮೂರನೇ ಒಂದಂಶದಷ್ಟು ಜನ ಸತ್ತರೆ ಇನ್ನುಳಿದ ಮೂರನೇ ಒಂದಂಶದಷ್ಟು ಜನ ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಾರೆ. ಉಳಿದ ಮೂರನೇ ಒಂದಂಶದಷ್ಟು ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರಕಿ ಮೊದಲಿನಂತಾಗುವ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಈ ಕಾಯಿಲೆ ಕಾಣಸಿಕೊಳ್ಳಬಹುದಾದರೂ, ಸಾಮಾನ್ಯವಾಗಿ 60 ವರ್ಷದ ನಂತರವೇ ಹೆಚ್ಚಾಗಿ ಕಾಣಸಿಗುತ್ತದೆ. ಮೆದುಳಿಗೆ ಯಾವುದಾದರೊಂದು ಭಾಗಕ್ಕೆ ರಕ್ತಸಂಚಾರ ನಿಂತು ಹೋಗಿ ಆ ಭಾಗದ ಮೆದುಳು ನಿರ್ಜೀವವಾಗುತ್ತದೆ ಮತ್ತು ಆ ಭಾಗದಿಂದ ನಿಯಂತ್ರಿಸಲ್ಪಡುವ ಕೆಲಸಗಳು ನಿಷ್ಕ್ರಿಯವಾಗುತ್ತದೆ. ಇದನ್ನೇ ಮೆದುಳಿನ ಆಘಾತ ಅಥವ ಸ್ಟ್ರೋಕ್ ಎನ್ನುತ್ತಾರೆ. ಎರಡು ರೀತಿಯ ಸ್ಟ್ರೋಕ್ ಇದ್ದು ಮೆದುಳಿನ ರಕ್ತನಾಳಗಳು ಒಡೆದುಕೊಂಡು ಮೆದುಳಿನ ಜೀವಕೋಶಗಳು ನಿರ್ಜೀವವಾಗುತ್ತದೆ. ಇದನ್ನು ಹಿಮೋರೇಜಿಕ್ ಸ್ಟ್ರೋಕ್ ಎನ್ನುತ್ತಾರೆ. ಇನ್ನೊಂದನ್ನು ಇಷ್ಕೆಮಿಕ್ ಸ್ಟ್ರೋಕ್ ಎನ್ನುತ್ತಾರೆ. ಇದರಲ್ಲಿ ರಕ್ತನಾಳಗಳ ಒಳಗೆ ರಕ್ತಹೆಪ್ಪುಗಟ್ಟಿಕೊಂಡು ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗಿ, ಆ ಭಾಗದ ಮೆದುಳಿನ ಜೀವಕೋಶಗಳು ಸಾಯುತ್ತದೆ. ಇದು ಅತೀ ಸಾಮಾನ್ಯ ಮತ್ತು ಹೆಚ್ಚಾಗಿ ಕಾಣಸಿಗುವ ರೋಗವಾಗಿರುತ್ತದೆ.
► ಸ್ಟ್ರೋಕ್ ಯಾರಿಗೆ ಬರಬಹುದು?
12 ಕಾರಣಗಳು
1. ಆಲ್ಕೋಹಾಲ್, ಸಿಗರೇಟ್ ಸೇವನೆ ಮಾದಕದ್ರವ್ಯ ಸೇವನೆ ಇರುವವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಮಧುಮೇಹ ರೋಗಿಗಳಿಗೆ.
3. ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುವವರಿಗೆ.
4. ಅಧಿಕ ರಕ್ತದೊತ್ತಡ ಇರುವವರಿಗೆ.
5. ವಂಶ ಪಾರಂಪರ್ಯವಾಗಿ ವಂಶವಾಹಿನಿಗಳಲ್ಲಿಯೂ ಬರುವ ಸಾಧ್ಯತೆ ಇರುತ್ತದೆ.
6. ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪೆಡಸುಗೊಂಡ ರಕ್ತನಾಳ ಇರುವವರಿಗೆ.
7. ಸ್ಥೂಲಕಾಯ, ಬೊಜ್ಜು ಜಾಸ್ತಿ ಇರುವವರಿಗೆ ಮತ್ತು ವಿಲಾಸಿ ಜೀವನಶೈಲಿ ಇರುವವರಿಗೆ.
8. ದುಡಿಮೆ ಇಲ್ಲದ, ದೈಹಿಕ ಶ್ರಮವಿಲ್ಲದ ಜೀವನಕ್ರಮ.
9. ಅತಿಯಾದ ಮಾನಸಿಕ ಒತ್ತಡ, ಮಾನಸಿಕ ವ್ಯಥೆ ಮತ್ತು ಮಾನಸಿಕ ವ್ಯಾಧಿ.
10. ಕುಡುಗೋಲು ಕಣ ಕಾಯಿಲೆ ಇರುವವರಿಗೆ.
11. ಅತಿಯಾದ ನೋವು ನಿವಾರಕಗಳ ಸೇವನೆ (ಬ್ರೂಪೇನ್ ಮಾತ್ರೆ).
12. ಸಮತೋಲನ ಇರುವ ಆಹಾರ ಸೇವನೆ ಮಾಡದಿರುವುದು, ಅತಿಯಾದ ಜಂಕ್ ಆಹಾರ ಸೇವನೆ ಮತ್ತು ಕೊಬ್ಬು, ಕರಿದ ಪದಾರ್ಥಗಳ ಸೇವನೆ.
► ಸ್ಟ್ರೋಕ್ನ್ನ ಲಕ್ಷಣಗಳು
12 ಲಕ್ಷಣಗಳು
1. ಮುಖದ ಒಂದು ಭಾಗದಲ್ಲಿ ನೋವು, ಕೈ, ಕಾಲು, ಎದೆ ಭಾಗದಲ್ಲಿ ನೋವು ಇರಬಹುದು.
2. ಕಣ್ಣು ಮಂಜಾಗುವುದು, ವಸ್ತುಗಳು ಎರಡೆರಡಾಗಿ ಕಾಣುವುದು.
3. ಉಸಿರಾಡಲು ಕಷ್ಟವಾಗುವುದು, ನುಂಗಲು ಕಷ್ಟವಾಗುವುದು.
4. ವಾಂತಿ, ವಾಕರಿಕೆ ಬಂದಂತಾಗುವುದು, ತಲೆ ತಿರುಗಿದಂತೆ ಭಾಸವಾಗುವುದು.
5. ಮೈಯಲ್ಲಿ ನಡುಕ.
6. ದೇಹದ ಸಮತೋಲನ ತಪ್ಪುವುದು, ಕೈಕಾಲುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು, ಕಣ್ಣು ಕತ್ತಲು ಬರುವುದು.
7. ನಡೆದಾಡಲು ಕಷ್ಟವಾಗುವುದು, ಕೈಕಾಲುಗಳು ಮರಗಟ್ಟಿದಂತೆ ಭಾಸವಾಗಬಹುದು.
8. ಮುಖ ಸೊಟ್ಟಗಾಗುವುದು, ಮುಖದಲ್ಲಿನ ಸ್ನಾಯುಗಳ ಮೇಲಿನ ನಿಯಂತ್ರಣ ತಪ್ಪುತ್ತದೆ. ಒಂದು ಭಾಗದ ಮುಖದಲ್ಲಿ ಸ್ನಾಯುಗಳ ನಿಯಂತ್ರಣ ಕಳೆದುಕೊಂಡು ಸೊಟ್ಟಗಾಗುತ್ತದೆ. ಕೈಕಾಲುಗಳ ನಿಯಂತ್ರಣವೂ ತಪ್ಪುತ್ತದೆ. ಎರಡು ಕೈಗಳನ್ನು ತಲೆಯ ಮೇಲೆ ಎತ್ತಲು ಹೇಳಿದಾಗ ಎರಡು ಕೈಗಳನ್ನು ಎತ್ತಲು ಕಷ್ಟವಾಗಬಹುದು. ಅದೇ ರೀತಿ ನಗಲು ಸಾಧ್ಯವಾಗುವುದಿಲ್ಲ.
9. ಕಾರಣವಿಲ್ಲದೆ ಅತಿಯಾದ ತಲೆನೋವು.
10. ಏನಾದರೂ ಕೆಲಸದ ಮಧ್ಯದಲ್ಲಿರುವಾಗ ಎಲ್ಲಾ ಆಲೋಚನೆಗಳು ನಿಷ್ಕ್ರಿಯವಾಗಿ ಏನೂ ತೋಚದಂ ತಾಗುವುದು, ಯೋಚನಾಶಕ್ತಿ ಕಳೆದುಕೊಳ್ಳುವುದು.
11. ಮಾತಾನಾಡಲು ಕಷ್ಟವಾಗುವುದು, ತೊದಲುವುದು ಇತ್ಯಾದಿ.
12. ಅತಿಯಾದ ಆಯಾಸ ಮತ್ತು ಭ್ರಾಂತಿಗಳಾಗುವುದು.
ಗುರುತಿಸುವುದು ಹೇಗೆ?
FAST ಎಂಬ ಶಬ್ದದ ಮುಖಾಂತರ ಸ್ಟ್ರೋಕ್ನ ಗುರುತಿಸಲಾಗುತ್ತದೆ ಮತ್ತು ತಕ್ಷಣವೇ ಸ್ಪಂದಿಸಲಾಗುತ್ತದೆ.
F (FACE) ಅಂದರೆ ಮುಖದಲ್ಲಿನ ನಗಲು ಸಾಧ್ಯವಾಗದಿರುವುದು.
A (ARMS) ಅಂದರೆ ಎರಡೂ ಕೈಗಳನ್ನು ಮೇಲೆತ್ತಲು ಸಾಧ್ಯವಾಗದಿರುವುದು.
S (SPEECH) ಅಂದರೆ ಮಾತನಾಡಲು ಕಷ್ಟವಾಗಿ ತೊದಲುವುದು.
T(TIME) ಕಾಲಹರಣ ಮಾಡದೇ ಕೂಡಲೇ ಆಸ್ಪತ್ರೆಗೆ ಧಾವಿಸಿ. ಜಾಸ್ತಿ ಕಾಲಹರಣ ಮಾಡಿದಷ್ಟೂ ಮೆದುಳಿನ ಅಘಾತದ ತೀವ್ರತೆ ಹೆಚ್ಚುತ್ತದೆ.
► ತಡೆಗಟ್ಟುವುದು ಹೇಗೆ?
ಶೇ. 80ರಷ್ಟು ಮೆದುಳಿನ ಅಘಾತವನ್ನು ಸಾಕಷ್ಟು ಮುಂಜಾಗೂರುಕತೆ ವಹಿಸಿ ತಡೆಗಟ್ಟಬಹುದು.
1. ಜೀವನ ಶೈಲಿ ಬದಲಾಯಿಸಿ, ಮದ್ಯಪಾನ, ಧೂಮಪಾನ ತ್ಯಜಸಬೇಕು. ಮಾದಕ ದ್ರವ್ಯವನ್ನು ಬಿಟ್ಟುಬಿಡಿ.
2. ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನಶೈಲಿ ಅಳವಡಿಸಿ, ಸೋಮಾರಿ ಜೀವನಶೈಲಿ ಬಿಡಿ. ವಿಲಾಸಿ ಜೀವನಕ್ರಮಕ್ಕೆ ತಿಲಾಂಜಲಿ ಇಡಬೇಕು.
3. ಕೊಬ್ಬು ರಹಿತ ಆಹಾರ, ಕರಿದ ಪದಾರ್ಥಗಳನ್ನು ತ್ಯಜಿಸಿ ಕಾಳು ಧಾನ್ಯಗಳಿರುವ ಹಸಿ ತರಕಾರಿ, ಹಣ್ಣು ಹಂಪಲು ಜಾಸ್ತಿ ತಿನ್ನಬೇಕು.
4. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು.
5. ಅತಿಯಾದ ಬೊಜ್ಜು, ಸ್ಥೂಲಕಾಯ ಇರಲೇಬಾರದು.ಃಒIಅಂದರೆ ದೇಹದ ತೂಕದ ಮಾಪನ 25ಕ್ಕಿಂತ ಕಡಿಮೆ ಇರಬೇಕು.
6. ಮಧುಮೇಹ ನಿಯಂತ್ರಣ ಮಾಡಬೇಕು.
7. ದಿನಕ್ಕೆ ಅರ್ಧ ಘಂಟೆ ಬಿರುಸು ನಡಿಗೆ ಮತ್ತು ದೈಹಿಕ ಕಸರತ್ತು ಮಾಡಬೇಕು.






