ಬದಲಾದ ಜೀವನಶೈಲಿಯ ಪ್ರತಿಬಿಂಬ ‘ಕ್ಯಾನ್ಸರ್’

ಕ್ಯಾನ್ಸರ್ ರೋಗ ಮನುಕುಲದ ದೊಡ್ಡ ಶತ್ರು. ಅನಾದಿಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ವಿಶ್ವದಾದ್ಯಂತ ಪ್ರತೀ ವರ್ಷ ಫೆಬ್ರವರಿ 4ರಂದು ‘ವಿಶ್ವ ಕ್ಯಾನ್ಸರ್ ಜಾಗೃತಿ ದಿನ’ ಎಂದು ಆಚರಿಸಲಾಗುತ್ತಿದೆ. ಅಂತರ್ ರಾಷ್ಟ್ರೀಯ ಕ್ಯಾನ್ಸರ್ ತಡೆ ಒಕ್ಕೂಟ ಈ ದಿನಾಚರಣೆಯನ್ನು 2000ದಿಂದ ಜಾರಿಗೆ ತಂದಿದೆ. ಯುನೆಸ್ಕೊ ಮಹಾನಿರ್ದೇಶಕರು, ಫ್ರೆಂಚ್ ಅಧ್ಯಕ್ಷರಾಗಿದ್ದ ಜಾಕ್ಯುಸ್ ಚಿರಾಕ್ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದರು. ದಿನೇ ದಿನೇ ಹೆಚ್ಚುತ್ತಿರುವ ಕ್ಯಾನ್ಸರ್ ರೋಗವನ್ನು ತಡೆಗಟ್ಟುವುದರ ಬಗ್ಗೆ, ಆರಂಭಿಕ ಹಂತದಲ್ಲಿ ಗುರುತಿಸುವ ಬಗ್ಗೆ ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿ, ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮಹದಾಸೆಯನ್ನು ಈ ಆಚರಣೆ ಹೊಂದಿದೆ.
ಕ್ಯಾನ್ಸರ್ ಪ್ರತೀ ವರ್ಷ 20 ಮಿಲಿಯನ್ ಹೊಸ ರೋಗಿಗಳ ಉಡುಗೊರೆಯನ್ನು ಜಗತ್ತಿಗೆ ನೀಡುತ್ತಿದೆ. ಸದ್ಯ ಪ್ರತೀ ವರ್ಷ 10 ಮಿಲಿಯನ್ ರೋಗಿಗಳ ಪ್ರಾಣ ತೆಗೆಯುವ ಕ್ಯಾನ್ಸರ್ 2030ರ ವೇಳೆಗೆ 13 ಮಿಲಿಯನ್ ರೋಗಿಗಳನ್ನು ಸಾಯಿಸಬಹುದು ಎಂದು ಅಂದಾಜಿಸಲಾಗಿದೆ. ಶೇ. 10 ರೋಗಿಗಳು ಆನುವಂಶಿಕ ರೂಪಾಂತರದಿಂದಾಗಿ ಮತ್ತು ಶೇ. 27 ಕ್ಯಾನ್ಸರ್ ಸಾವುಗಳು ದುಶ್ಚಟಗಳ ಕಾರಣಗಳಿಂದ ಸಂಭವಿಸುವವು. ಅವುಗಳೆಂದರೆ ತಂಬಾಕು ಸೇವನೆ ಮತ್ತು ಮದ್ಯಪಾನ. ಭಾರತದಲ್ಲಿ ಪುಪ್ಪುಸ, ಸ್ತನಗಳು ಮತ್ತು ಗರ್ಭಕೊರಳಲ್ಲಿ ಉಂಟಾಗುವ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದೆ. 2020ರಲ್ಲಿಯ ಹಾವಳಿಗಿಂತ ಶೇ. 12.8 ಕ್ಯಾನ್ಸರ್ ಹಾವಳಿ 2025ರಲ್ಲಿ ಹೆಚ್ಚಾಗಿರುವುದು ಅಧ್ಯಯನಗಳಿಂದ ಕಂಡು ಬಂದಿದೆ. ಈಗ ಕ್ಯಾನ್ಸರನ್ನು ಜೀವನ ಶೈಲಿಯ ರೋಗ ಎಂದು ಪರಿಗಣಿಸಲಾಗಿದೆ.
ಕ್ಯಾನ್ಸರ್ ಅಂದರೆ ಸಾವಲ್ಲ
ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ 2ನೇ ಅಗ್ರಸ್ಥಾನವನ್ನು (ಮೊದಲನೇ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ಈ ಭಯಾನಕ ಕಾಯಿಲೆಗೆ ತುತ್ತಾದ ರೋಗಿ ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ಹಿಂದಿನ ಕಾಲದಲ್ಲಿ ಪರಿಣಿತ ವೈದ್ಯರ ಸೇವೆ, ಅತ್ಯಾಧುನಿಕ ತಂತ್ರಜ್ಞಾನ ದುರ್ಲಭವಾಗಿತ್ತು. ಬಡತನ, ಅನಕ್ಷರತೆ, ಅಜ್ಞಾನ, ಮಡುಗಟ್ಟಿನಿಂತ ಮೂಢನಂಬಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಈ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬ ಹಣೆಪಟ್ಟಿ ಪಡೆದುಕೊಂಡಿತ್ತು. ಇತ್ತೀಚಿನ ತಂತ್ರಜ್ಞಾನದ ಕ್ರಾಂತಿ, ಪರಿಣಿತ ವೈದ್ಯರ ಲಭ್ಯತೆ, ಏರಿದ ಜನರ ತಿಳುವಳಿಕೆ ಮಟ್ಟ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಇಂದು ಸಾಧ್ಯವಾಗಿದೆ. ಇದು ಗರ್ಭಕೊರಳಿನ ಕ್ಯಾನ್ಸರ್ ವಿಷಯದಲ್ಲಂತೂ ನೂರಕ್ಕೆ ನೂರು ಸತ್ಯ.
ಗರ್ಭಕೊರಳ ಕ್ಯಾನ್ಸರ್ ಆಳ-ಅಗಲ
ಬಹಳಷ್ಟು ಕ್ಯಾನ್ಸರ್‌ಗಳಂತೆ ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗುವವರೆಗೂ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ಮಹಿಳೆಯರನ್ನು ಹೆಚ್ಚು ಕಾಡುವ ಕ್ಯಾನ್ಸರ್ ಗಳಲ್ಲಿ ಇದು ನಾಲ್ಕನೆಯ ಸ್ಥಾನದಲ್ಲಿದೆ. ಶೇ. 99ರಷ್ಟು ಪ್ರಕರಣಗಳಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಎಚ್.ಪಿ.ವಿ.(ಹ್ಯೂಮನ್ ಪ್ಯಾಪಿಲೋಮ ವೈರಸ್)ಯಿಂದ ಈ ಕ್ಯಾನ್ಸರ್ ಉಂಟಾಗುತ್ತದೆ. ಅಲ್ಲದೆ ಹರ್ಪಿಸ್ ಅಥವಾ ಎಚ್.ಪಿ.ವಿ. ನಂತರ ಉಂಟಾಗುವ ಸೋಂಕು ಗರ್ಭಕೊರಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇಂತಹ ಮುನ್ಸೂಚನೆಗಳು ಕಂಡುಬಂದ ಸ್ತ್ರೀಯರಿಗೆ ಎಚ್.ಪಿ.ವಿ. ಡಿಎನ್‌ಎ ಪರೀಕ್ಷೆ ನಡೆಸಿದರೆ ಈ ರೋಗದ ಬೆಳವಣಿಗೆ ಕುರಿತು ವಿಶ್ವಾಸಾರ್ಹ ಮಾಹಿತಿ ದೊರೆಯುತ್ತದೆ. ಈಗಿನ ಅಂದಾಜಿನ ಪ್ರಕಾರ, ಪ್ರತೀ ವರ್ಷ 1,32,000ಕ್ಕೂ ಹೆಚ್ಚು ಮಹಿಳೆಯರಲ್ಲಿ ಗರ್ಭಕೊರಳಿನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸುಮಾರು 74,000 ಮಹಿಳೆಯರು ಈ ಕಾಯಿಲೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಗರ್ಭಕೊರಳಿನ ಕ್ಯಾನ್ಸರ್ ಬರುವ ಅಪಾಯ ಶೇ.2.4ರಷ್ಟಿದೆ.
ವಿಶ್ವದಲ್ಲಿ ಈ ಪ್ರಮಾಣ ಶೇ.1.3. ಶೇ.84ರಷ್ಟು ಗರ್ಭಕೊರಳಿನ ಕ್ಯಾನ್ಸರ್ ರೋಗಿಗಳು 30-64 ವಯೋಮಾನದವರು. ದಕ್ಷಿಣ ಏಶ್ಯದಲ್ಲಿ ಪ್ರತೀ ಒಂದು ಗಂಟೆಗೆ ಈ ಕ್ಯಾನ್ಸರ್‌ನಿಂದ ಸಾಯುತ್ತಿರುವ ಪ್ರತೀ 10 ಮಹಿಳೆಯರಲ್ಲಿ 8 ಮಂದಿ ಭಾರತಕ್ಕೆ ಸೇರಿದವರಾಗಿರುತ್ತಾರೆ ಎಂಬುದು ಹೆಚ್ಚು ಆತಂಕಕಾರಿ.
ಗರ್ಭಕೊರಳ ಕ್ಯಾನ್ಸರ್‌ಗೆ ಕಾರಣ
ಬಹುತೇಕ ಗರ್ಭಕೊರಳಿನ ಕ್ಯಾನ್ಸರಿಗೆ ಎಚ್.ಪಿ.ವಿ. ಕಾರಣ. ಮಾನವರ ದೇಹದಲ್ಲಿ ಎಚ್.ಪಿ.ವಿ. ಇದ್ದೇ ಇರುತ್ತದೆ. ಎಚ್.ಪಿ.ವಿ.ಯ 16 ಹಾಗೂ 18ನೇ ಮಾದರಿ ಶೇ.70ರಷ್ಟು ಈ ಕ್ಯಾನ್ಸರ್ ಪ್ರಕರಣಗಳಿಗೆ ಮೂಲ ಕಾರಣ. ಜೀವಕ್ಕೆ ಬೆದರಿಕೆ ಒಡ್ಡುವ ಕಾಯಿಲೆ ಇದು. ಭಾರತದಲ್ಲಿ ಮಹಿಳೆಯರಿಗೆ ಬರುವ ಕ್ಯಾನ್ಸರ್‌ಗಳಲ್ಲಿ ಇದಕ್ಕೆ ಪ್ರಥಮ ಸ್ಥಾನ. ಆದರೆ ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಪ್ರಚಾರ ಇದೆ. ಗರ್ಭಕೊರಳಿನ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲ. ಹೀಗಾಗಿ ಭಾರತದಲ್ಲಿ ಹೆಚ್ಚಿನ ಮಹಿಳೆಯರಿಗೆ ಈ ಬಗ್ಗೆ ಅರಿವಿರುವುದೇ ಇಲ್ಲ. ಆಸ್ಪತ್ರೆಗೆ ಬರುವ ವೇಳೆಗೆ ತಡವಾಗಿ ಹೋಗಿರುತ್ತದೆ. ಬದುಕಿಸುವುದು ಕಷ್ಟ ಎನ್ನುವ ಹಂತದಲ್ಲಿ ಇರುತ್ತಾರೆ.
ಇಂದು ಪ್ರಪಂಚದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಷ್ಟೇ ಅಲ್ಲ, ಸಂಪದ್ಭರಿತ ಮುಂದುವರಿದ ರಾಷ್ಟ್ರಗಳಲ್ಲೂ, ಮಾಯವಾಗಿದ್ದ ಸೋಂಕು ರೋಗಗಳ ಪುನರಾಗಮನವಾಗಿ ಅವು ಜನಾರೋಗ್ಯ ಸಮಸ್ಯೆಗಳಾಗುವ ಸಂಭವ ಇರುವಂತೆಯೇ, ಇಂದು ಅಸಾಂಕ್ರಾಮಿಕ ರೋಗಗಳ ಅಟ್ಟಹಾಸ ಹೆಚ್ಚುತ್ತಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಕ್ಯಾನ್ಸರ್ ರೋಗದ ವಿರುದ್ಧದ ಲಸಿಕೆಯ ಬಳಕೆಯಲ್ಲಿ ಕಂಡು ಬಂದಿರುವ ಯಶಸ್ಸು ಕಡಿಮೆ ಪ್ರಮಾಣದ್ದಾದರೂ, ಪ್ರಯತ್ನಗಳು ಅವ್ಯಾಹತವಾಗಿ ಮುಂದುವರಿದಿವೆ. ಇಂದು ಗರ್ಭಕೊರಳಿನ ಕ್ಯಾನ್ಸರ್‌ಗೆ ಕಡಿವಾಣ ಹಾಕುವ ಲಸಿಕೆ ಲಭ್ಯವಾಗಿದೆ.
ಭಾರತದಲ್ಲಿ ಗರ್ಭಕೊರಳಿನ ಕ್ಯಾನ್ಸರ್‌ನಿಂದ ಉಂಟಾಗುವ ಮರಣ ಸಂಖ್ಯೆ ಕಳೆದ ಹತ್ತು ವರ್ಷಗಳಿಂದ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಕ್ಯಾನ್ಸರ್ ಪೂರ್ವ ಹಂತದಲ್ಲಿ ಗರ್ಭಕೊರಳಿನ ಪರೀಕ್ಷೆ ನಡೆಸಿ ಅದರಲ್ಲಿ ಆಗುವ ಬದಲಾವಣೆಗಳನ್ನು ಪತ್ತೆ ಮಾಡುತ್ತಿರುವುದು. ಅಸಹಜ ಜೀವಕೋಶಗಳನ್ನು ಮುಂಚೆಯೇ ಪತ್ತೆ ಮಾಡಿದರೆ ಕ್ಯಾನ್ಸರ್ ನಿಯಂತ್ರಣ ಅಥವಾ ಚಿಕಿತ್ಸೆ ನೀಡಬಹುದು. ಎಚ್.ಪಿ.ವಿ. ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದರೂ, ರೋಗ ಪರೀಕ್ಷೆ ಬಹಳ ಮುಖ್ಯವಾದದ್ದು ಎಂಬುದನ್ನು ಮರೆಯುವಂತಿಲ್ಲ.
ಕೊನೆಯ ಮಾತು
ಕ್ಯಾನ್ಸರ್ ಈಗ ಗೆಲ್ಲುವ ಕಾಯಿಲೆಯಾಗುತ್ತಿದೆ. ಮೊದಲ ಹಜ್ಜೆಯಾಗಿ ಗರ್ಭಕೊರಳಿನ ಕ್ಯಾನ್ಸರ್‌ಗೆ ಲಸಿಕೆ ಬಂದಿದೆ. ಮುಂಬರುವ ದಿನಗಳಲ್ಲಿ ವೈದ್ಯವಿಜ್ಞಾನಿಗಳ ಪರಿಶ್ರಮದಿಂದ ಎಲ್ಲಾ ಕ್ಯಾನ್ಸರಿಗೂ ಕಡಿವಾಣ ಹಾಕಲು ಸಾಧ್ಯವಾಗಬಹುದು. ಕ್ಯಾನ್ಸರ್ ಕಟ್ಟಿ ಹಾಕಲು ಎಲ್ಲರೂ ಕೈ ಜೋಡಿಸೋಣ. ಅಂತಿಮ ಜಯ ಮಾನವಕುಲದ್ದಾಗಲಿ.






