ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಒಳ್ಳೆಯದೋ ಅಥವಾ ಕಾಫಿ?

ಸಾಂದರ್ಭಿಕ ಚಿತ್ರ | Photo Credit : freepik
ಸಾಮಾನ್ಯವಾಗಿ ಎಲ್ಲರ ಬೆಳಗ್ಗೆ ಆರಂಭವಾಗುವುದು ಒಂದೋ ಒಂದು ಕಪ್ ಟೀ ಅಥವಾ ಒಂದು ಕಪ್ ಕಾಫಿಯಿಂದ ಅಲ್ವೇ? ಆದರೆ ಈ ಟೀ ಮತ್ತು ಕಾಫಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಯಾವುದು ಎಂಬ ಚರ್ಚೆ ಶುರುವಾಗಿ ವರ್ಷಗಳೇ ಕಳೆದಿವೆ. ಹಾಗಿದ್ದರೆ ಬ್ರೇಕ್ಫಾಸ್ಟ್ಗಿಂತ ಮೊದಲು ಕುಡಿಯಲು ಅತ್ಯಂತ ಒಳ್ಳೆಯದು ಯಾವುದು?
ಬ್ಲಾಕ್ ಕಾಫಿ ಎನ್ನುತ್ತದೆ ಹೊಸ ಅಧ್ಯಯನ. ನೀವೇನಂತೀರಿ? ಟೀ ಮತ್ತು ಕಾಫಿಯನ್ನು ಹೋಲಿಕೆ ಮಾಡಿ ನೋಡಿದರೆ, ಟೀಯಲ್ಲಿ ಇಲ್ಲದ ಕೆಲ ವಿಶೇಷ ಗುಣಗಳು ಕಾಫಿಗಿದೆ.
►ಮನಸ್ಸಿಗೆ ತಾಜಾತನ ನೀಡುವಲ್ಲಿ ಕಾಫಿಯೇ ಮುಂದು…
ಹಾಗೆ ನೋಡಿದರೆ ಚಹಾಗಿಂತ ಕಾಫಿಯಲ್ಲಿ ಕೆಫೀನ್ ಅಂಶ ಹೆಚ್ಚು ಇರುತ್ತದೆ. ಒಂದು ಕಪ್ ಬ್ಲಾಕ್ ಕಾಫಿಯಲ್ಲಿ 90-100 ಮಿ.ಗ್ರಾಂ ಕೆಫೀನ್ ಇದ್ದರೆ, ಒಂದು ಕಪ್ ಚಹಾದಲ್ಲಿ ಇದರ ಅರ್ಧದಷ್ಟು ಕೆಫೀನ್ ಮಾತ್ರ ಇರುತ್ತದೆ. ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಮೆದುಳನ್ನು ಚುರುಕಾಗಿಸಲು, ಏಕಾಗ್ರತೆ ಲಭಿಸಲು ಬ್ಲಾಕ್ ಕಾಫಿ ಸಹಾಯ ಮಾಡುತ್ತದೆ. ದೈನಂದಿನ ಕೆಲಸ ಅಥವಾ ಕಲಿಕೆಯ ಆರಂಭದಲ್ಲಿ ಶರೀರ ಹಾಗೂ ಮನಸ್ಸಿಗೆ ತಾಜಾತನ ನೀಡಲು ಟೀಗಿಂತ ಕಾಫಿ ಒಳ್ಳೆಯದು.
►ತೂಕ ಇಳಿಸಲು…
ದೇಹದ ಭಾರವನ್ನು ಇಳಿಸಲು ಪ್ರಯತ್ನಿಸುವವರಿಗೆ ಬ್ಲಾಕ್ ಕಾಫಿ ಒಂದು ಅನುಗ್ರಹವೆಂದೇ ಹೇಳಬಹುದು. ಸಕ್ಕರೆ ಮತ್ತು ಹಾಲು ಸೇರಿಸದ ಕಾಫಿಯಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. ಇದು ಮೆಟಾಬಾಲಿಸಂ (ಚಯಾಪಚಯ ಅಥವಾ ಜೀವ ರಾಸಾಯನಿಕ ಕ್ರಿಯೆ) ಹೆಚ್ಚಿಸಿ ಶರೀರದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದೇ ವೇಳೆ, ಹಾಲು ಸೇರಿಸಿದ ಚಹಾದಲ್ಲಿ ಕ್ಯಾಲೊರಿ ಹೆಚ್ಚು ಇರುವುದರಿಂದ ಮತ್ತು ಅದನ್ನು ಪದೇಪದೆ ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು.
►ರೋಗ ಪ್ರತಿರೋಧ ಮತ್ತು ನೆನಪಿನ ಶಕ್ತಿಗೆ…
ಹೃದ್ರೋಗ, ಸಕ್ಕರೆ ಕಾಯಿಲೆ ಇತ್ಯಾದಿ ರೋಗಗಳನ್ನು ತಡೆಯಲು ಸಹಾಯ ಮಾಡುವ ಆ್ಯಂಟಿಆಕ್ಸಿಡೆಂಟ್ ಅಂಶ ಬ್ಲಾಕ್ ಕಾಫಿಯಲ್ಲಿ ಧಾರಾಳವಾಗಿದೆ. ಜೊತೆಗೆ ದಿನನಿತ್ಯ ಕಾಫಿ ಸೇವನೆಯು ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಮರೆವಿನ ಕಾಯಿಲೆ (ಅಲ್ಝೈಮರ್ ರೋಗ), ಪಾರ್ಕಿನ್ಸನ್ಸ್ ಇತ್ಯಾದಿ ರೋಗಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
►ವರ್ಕೌಟ್ಗಿಂತ ಮುಂಚೆ ಒಂದು ಕಪ್ ಕಾಫಿ…
ನೀವು ಜಿಮ್ ಗೆ ಹೋಗುವವರೋ ಅಥವಾ ದಿನನಿತ್ಯ ವ್ಯಾಯಾಮ ಮಾಡುವವರಾಗಿದ್ದರೆ, ವರ್ಕೌಟ್ಗಿಂತ ಮುಂಚೆ ಒಂದು ಕಪ್ ಕಾಫಿ ಕುಡಿಯುವುದು ತುಂಬಾ ಒಳ್ಳೆಯದು. ಇದು ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಮತ್ತು ಹೆಚ್ಚು ಹೊತ್ತು ವ್ಯಾಯಾಮ ಮಾಡಲು ನೆರವಾಗುತ್ತದೆ.
►ಗಮನಿಸಬೇಕಾದ ಅಂಶಗಳು…
ಬ್ಲಾಕ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ, ಕುಡಿಯುವ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ. ಸಕ್ಕರೆ ಅಥವಾ ಕ್ರೀಮ್ ಸೇರಿಸದೆ ಕುಡಿಯುವುದು ಇನ್ನೂ ಒಳ್ಳೆಯದು. ರುಚಿಗೆ ಬೇಕಾದರೆ ಚಿಟಿಕೆ ದಾಲ್ಚಿನ್ನಿ ಪುಡಿ (ಸಿನಮನ್ ಪೌಡರ್) ಸೇರಿಸಬಹುದು. ಬ್ಲಾಕ್ ಕಾಫಿ ಇಷ್ಟವಿಲ್ಲದವರು ಚಹಾ ಕುಡಿಯಬಹುದು. ಆದರೆ ದಿನಕ್ಕೆ ಎರಡು ಕಪ್ಗಿಂತ ಹೆಚ್ಚು ಆಗದಂತೆ ನೋಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಕೃಪೆ: manoramaonline.com







