ಸಂಸ್ಕರಿಸಿದ ಎಣ್ಣೆಯಿಂದಷ್ಟೇ ಬೊಜ್ಜು ಬರುವುದಿಲ್ಲ!

ಸಾಂದರ್ಭಿಕ ಚಿತ್ರ | Photo Credit : freepik
ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಎರಡು ಮಾತುಗಳನ್ನು ಹೇಳಿದ್ದಾರೆ. ಒಂದು ಭಾರತದಲ್ಲಿ ಅನರ್ಹ ಆಹಾರ ತಜ್ಞರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಎರಡನೆಯದು 1970- 80ರ ದಶಕದಲ್ಲಿ ಸಂಸ್ಕರಿತ ಎಣ್ಣೆಗಳನ್ನು ಅನಿಯಂತ್ರಿತವಾಗಿ ಬಳಸಲು ಅವಕಾಶ ಮಾಡಿಕೊಟ್ಟಿರುವುದು ಭಾರತದಲ್ಲಿ ಬೊಜ್ಜಿನ ಸಮಸ್ಯೆ ಬೆಳೆಯಲು ಕಾರಣವಾಗಿದೆ. ಈ ಬಗ್ಗೆ ಆಹಾರ ತಜ್ಞರು ಹೇಳುವುದೇನು?
ಭಾರತದ ಮೂಲೆ ಮೂಲೆಯಲ್ಲಿ ಆಹಾರ ತಜ್ಞರಿದ್ದಾರೆ. ಆದರೆ ಅವರು ಅರ್ಹ ತಜ್ಞರೆ ಎನ್ನುವುದನ್ನು ಪರೀಕ್ಷಿಸುವ ವ್ಯವಸ್ಥೆಯಿಲ್ಲ. ಹೀಗಾಗಿ ತಪ್ಪು ಸುದ್ದಿಗಳು ಹರಡುತ್ತಿವೆ ಮತ್ತು ಅದರಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
“ಅನರ್ಹ ಸ್ವಯಂ ಘೋಷಿತ ಆಹಾರ ತಜ್ಞರು ತಪ್ಪು ಮಾಹಿತಿಯ ಮೂಲಕ ಭಾರತದ ಬೊಜ್ಜಿನ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ. ಇಂತಹ ತಪ್ಪು ದಾರಿಗೆಳೆಯುವ ಮಾಹಿತಿಯಿಂದ ಜನರನ್ನು ರಕ್ಷಿಸುವ ಅಗತ್ಯವಿದೆ. ಅದಕ್ಕಾಗಿ ಒಂದು ಮೆಕಾನಿಸಂ ವಿನ್ಯಾಸಗೊಳಿಸುವಂತೆ ಕಾನೂನು ರಚಿಸುವವರನ್ನು ಅವರು ಒತ್ತಾಯಿಸಿದ್ದಾರೆ.
ಜಿಎಲ್ಪಿ-ಆಧಾರಿತ (ಗ್ಲುಕಗೋನ್ ರೀತಿಯ ಪೆಪ್ಟೈಡ್ 1 ಅಗೊನಿಸ್ಟ್ಗಳು) ಔಷಧಿಗಳನ್ನು ತೆಗೆದುಕೊಳ್ಳುವುದು ವ್ಯಾಪಕವಾಗಿ ಫ್ಯಾಷನೇಬಲ್ ಆಗಿದೆ. ಇದರಿಂದಾಗಿ ದೀರ್ಘಕಾಲೀನ ಸಮಸ್ಯೆಗಳು ಆಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಈ ಹಿಂದೆ 1970 ಮತ್ತು 80ರ ದಶಕದಲ್ಲಿ ಸಂಸ್ಕರಿತ ಎಣ್ಣೆಗಳನ್ನು ಅನಿಯಂತ್ರಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಇದು ಸಾರ್ವಜನಿಕ ಆರೋಗ್ಯದ ತಪ್ಪು ನಿರ್ದೇಶನವಾಗಿತ್ತು ಎಂದೂ ಹೇಳಿದ್ದಾರೆ.
ಆಹಾರ ತಜ್ಞರು ಹೇಳುವುದೇನು?
ಗುಜರಾತ್ ಮೂಲದ ಆಹಾರ ತಜ್ಞೆ ದಿವ್ಯಾ ಅವರ ಪ್ರಕಾರ, “ಮೊದಲನೆಯದು ನೂರಕ್ಕೆ ನೂರರಷ್ಟು ನಿಜ. ಈಗ ನಕಲಿ ಆಹಾರ ತಜ್ಞರು ಬೆಳೆದಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿ ಜನರನ್ನು ನಂಬಿಸಲಾಗುತ್ತಿದೆ. ಆದರೆ ಸಂಸ್ಕರಿತ ಎಣ್ಣೆಯಿಂದಾಗಿಯೇ ಬೊಜ್ಜುತನ ಸೃಷ್ಟಿಯಾಗಿದೆ ಎನ್ನುವುದನ್ನು ಶೇ 100ರಷ್ಟು ನಿಜವೆಂದು ನಂಬಲಾಗದು. ನನ್ನ ಪ್ರ್ಯಾಕ್ಟಿಸ್ನಲ್ಲಿ ನಾನು ಕಂಡುಕೊಂಡಿರುವ ಪ್ರಕಾರ ಜೀವನಶೈಲಿ ಸಮಸ್ಯೆಯಿಂದಲೇ ಬೊಜ್ಜು ಬೆಳೆಯುತ್ತಿದೆ. ಸಮತೋಲಿತ ಆಹಾರ ಮತ್ತು ವ್ಯಾಯಾಮದ ಕೊರತೆಯೇ ಮುಖ್ಯ ಕಾರಣವೆಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಸಂಸ್ಕರಿತ ಎಣ್ಣೆ ಸಂಪೂರ್ಣ ಕಾರಣ ಎನ್ನಲು ಸಾಧ್ಯವಿಲ್ಲ.”
ವಿಷಯವನ್ನು ಸಾಮಾನ್ಯೀಕರಿಸುವುದು ಸರಿಯಲ್ಲ!
ಉದ್ಯಮಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಜ್ಞರಾಗಿರುವ ಬೆಂಗಳೂರಿನ ಸವಿತಾ ಭರಮಗೌಡ್ರ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಅವರ ಪ್ರಕಾರ, “ಸಲಹೆ ನೀಡುವವವರು ಅನರ್ಹರು ಅಥವಾ ಅರ್ಹರು ಎನ್ನುವುದನ್ನು ಹೊರತುಪಡಿಸಿ ನೋಡಿದರೆ ಒಬ್ಬರ ಸಲಹೆಯಿಂದ ಬೊಜ್ಜು ಬರಲು ಸಾಧ್ಯವಿಲ್ಲ. ಪ್ರತಿ ವ್ಯಕ್ತಿಯ ಜೀವನಶೈಲಿ, ಆಹಾರ ಕ್ರಮ, ಚಟಗಳು, ಆರೋಗ್ಯದ ಸಮಸ್ಯೆಗಳು ಇತ್ಯಾದಿ ಭಿನ್ನವಾಗಿರುತ್ತದೆ. ಸಾಮಾನ್ಯೀಕರಿಸಿ ಹೇಳುವ ಮಾಹಿತಿ ಪೂರ್ತಿ ಸರಿಯಾಗಿ ಇರದೆ ಇರಬಹುದು ಮತ್ತು ಸಲಹೆಗಳು ಎಲ್ಲಾ ವರ್ಗದವರಿಗೂ ಸೂಕ್ತವಾಗಿರಲ್ಲದೆ ಇರಬಹುದು.”
ಅವರ ಪ್ರಕಾರ ಸಂಸ್ಕರಿತ ಎಣ್ಣೆಗಳು ಆಹಾರದಲ್ಲಿ ಹೆಚ್ಚಿಗೆ ಬಳಕೆಯಾದಾಗ ಮಾತ್ರ ಬೊಜ್ಜಿಗೆ ಕಾರಣವಾಗಬಹುದು. “ಸಂಸ್ಕರಿತ ಎಣ್ಣೆಗಳು ಆಹಾರ ಕಾನೂನಿನ ಅಡಿಯಲ್ಲಿ ನಿಯಂತ್ರಿಸಲ್ಪಟ್ಟರೂ ಕೂಡ ಅದು ಸರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನಬಹುದು. ಯಾವುದೇ ವಿಧದ ಕೊಬ್ಬು ಉತ್ತಮ ಕೊಬ್ಬುಗಳನ್ನು ಸಹ ಸೇರಿಸಿ, ಯಾವುದೇ ವಿಧಾನ ಅಥವಾ ಆಹಾರದಲ್ಲಿ ಹೆಚ್ಚಾಗಿ ಬಳಕೆಯಾದಾಗ ಅದು ಬೊಜ್ಜಿಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮಗಳಿಂದ ಸಿಗುವ ಮಾಹಿತಿ ಅಥವಾ ತಪ್ಪು ಮಾಹಿತಿ ಇಂದ ಬೊಜ್ಜು ಹೆಚ್ಚಾಗುವುದಿಲ್ಲ ಅದರಿಂದ ಬೇರೆ ಸಮಸ್ಯೆಗಳು ಉಂಟಾಗಬಹುದೇನೋ, ಆದರೆ ನಮ್ಮ ಬೊಜ್ಜಿಗೆ ನಾವೇ ಕಾರಣ” ಎಂದು ಅವರು ಅಭಿಪ್ರಾಯಪಟ್ಟರು.
ಸವಿತಾ ಅವರ ಪ್ರಕಾರ, “ಜನರು ತಮ್ಮ ಹಿನ್ನೆಲೆ, ಶಿಕ್ಷಣ ಮತ್ತು ಸ್ಥಾನಮಾನಗಳ ಹೊರತಾಗಿಯೂ ಕೂಡ ಆಹಾರದ ಬಗ್ಗೆ ಬಹಳ ಕಡಿಮೆ ತಿಳಿವಳಿಕೆ ಹೊಂದಿರುತ್ತಾರೆ. ಮುಖ್ಯವಾಗಿ ಆಹಾರ ಗುಣಮಟ್ಟ ಮತ್ತು ಸಂಬಂಧಪಟ್ಟ ಕಾನೂನಿನ ಬಗ್ಗೆ ಸಮಾಜದಲ್ಲಿ ಬಹಳಷ್ಟು ಗೊಂದಲಗಳಿವೆ. ಬಹಳ ತಪ್ಪು ಮಾಹಿತಿ ಸಹ ಹರಡುತ್ತಿದೆ. ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಸ್ಥಳೀಯ ಆಹಾರ, ಆಯಾ ಜನರ ಜೀವನಶೈಲಿ, ಹಬ್ಬಗಳು, ಋತುಗಳು ಮತ್ತು ವಾತಾವರಣವನ್ನು ಅನುಸರಿಸಿ ಬೆಳೆದಿವೆ. ಅದರಲ್ಲಿ ಅಪಾರ ಜಾಣ್ಮೆ ಮತ್ತು ವಿಜ್ಞಾನ ಕೂಡ ಅಡಗಿದೆ.”







