"ಡಿಜಿಟಲ್ ಕಣ್ಣು ಬೇನೆ" ತಪ್ಪಿಸುವುದೇಗೆ? ವೈದ್ಯರ ಸಲಹೆಗಳೇನು?

ಸಾಂದರ್ಭಿಕ ಚಿತ್ರ | Photo Credit : freepik
ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತವೆ.
ಇಂದಿನ ಡಿಜಿಟಲ್ ಕೇಂದ್ರಿತ ಜಗತ್ತಿನಲ್ಲಿ ನಮ್ಮ ಕಣ್ಣುಗಳು ದೀರ್ಘಕಾಲದವರೆಗೆ ಪರದೆಯನ್ನು ವೀಕ್ಷಿಸುತ್ತಿರಬೇಕಾಗುತ್ತದೆ. ಹೀಗಾಗಿ ‘ಡಿಜಿಟಲ್ ಕಣ್ಣು ಬೇನೆ’ ಎಂದು ಕರೆಯಲಾಗುವ ಸಮಸ್ಯೆಗಳ ಆಗರವನ್ನು ಆಹ್ವಾನಿಸಿಕೊಳ್ಳುತ್ತೇವೆ. ಈ ಡಿಜಿಟಲ್ ಕಣ್ಣು ಬೇನೆಯಲ್ಲಿ ಒಣ ಕಣ್ಣುಗಳು, ಮಂದವಾದ ದೃಷ್ಟಿ, ತಲೆನೋವುಗಳು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ.
ಶಾರ್ಪ್ ಐ ಹಾಸ್ಪಿಟಲ್ಸ್ನಲ್ಲಿ ಹಿರಿಯ ತಜ್ಞರಾಗಿರುವ ಡಾ ರಕ್ಷಿತ್ ಒಪಿ ಅವರು ಅಪಾಯದ ಚಿಹ್ನೆಗಳು ಇಲ್ಲದೆ ಇದ್ದರೂ ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯುವುದು ದೃಷ್ಟಿ ನಷ್ಟ ಮತ್ತು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶ ಸಾಧ್ಯವಾಗಿಸಲಿದೆ.
ಪರದೆಯ ಜೊತೆಗೆ ಕಳೆಯುವ ಸಮಯವನ್ನು ಕಡಿಮೆ ಮಾಡುವ ಅಗತ್ಯವಿದೆಯಾದರೂ, ಬಹಳಷ್ಟು ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಅವರು ಕಣ್ಣನ್ನು ರಕ್ಷಿಸಿಕೊಳ್ಳುವುದು ಹೇಗೆ?
ಡಿಜಿಟಲ್ ಕಣ್ಣಿನ ನೋವಿನಿಂದ ರಕ್ಷಿಸಿಕೊಳ್ಳಲು ವೈದ್ಯರು 20-20-20 ನಿಯಮವನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಲು 20 ಸೆಕೆಂಡ್ಗಳ ಕಾಲ ಪರದೆಯಿಂದ ಕಣ್ಣನ್ನು ಸರಿಸುವುದು. ಇಂತಹ ಸರಳ ಅಭ್ಯಾಸಗಳು ಕಣ್ಣಿನ ಸ್ನಾಯುಗಳಿಗೆ ಆರಾಮ ನೀಡಲು ಮತ್ತು ಸುಸ್ತು ಮತ್ತು ಬೇನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕುತ್ತಿಗೆ ನೋವನ್ನು ಕಡಿಮೆ ಮಾಡಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿನ ಮಟ್ಟಕ್ಕೆ ಇರಿಸಬೇಕು. ಬೆಳಕನ್ನು ಪರಿಸರಕ್ಕೆ ತಕ್ಕಂತೆ ಹೊಂದಿಸಿರಬೇಕು. ಕಣ್ಣಿನ ಅಹಿತಕರ ಭಾವನೆಯನ್ನು ಕಡಿಮೆ ಮಾಡಲು ಆ್ಯಂಟಿ ಗ್ಲೇರ್ ಪರದೆಗಳನ್ನು ಬಳಸಬಹುದು.
ಈ ರಕ್ಷಣಾ ಕ್ರಮಗಳ ಜೊತೆಗೆ ಕಣ್ಣಿನ ಆರೋಗ್ಯಕ್ಕಾಗಿ ಕೆಲವು ಪೋಷಕಾಂಶಗಳನ್ನು ಸೇವಿಸಬಹುದು. ವಿಟಮಿನ್ ಸಿ ಮತ್ತು ಇ ಜೊತೆಗೆ ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಸತು ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ. ಹೆಚ್ಚುವರಿಯಾಗಿ ಧ್ಯಾನ ಅಥವಾ ಯೋಗ ಒತ್ತಡವನ್ನು ಕಡಿಮೆ ಮಾಡಬಹುದು.
ಡಿಜಿಟಲ್ ಕಣ್ಣಿನ ಬೇನೆ ಕಡಿಮೆ ಮಾಡಲು ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ,
* 20-20-20 ನಿಯಮ ಅನುಸರಿಸುವುದು
* ಕಾರ್ಯಸ್ಥಳವನ್ನು ಅತ್ಯುತ್ತಮಗೊಳಿಸುವುದು
* ಆ್ಯಂಟಿಗ್ಲೇರ್ ಪರದೆ ಬಳಸುವುದು
* ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಕೊಳ್ಳುವುದು
* ಆಹಾರದಲ್ಲಿ ಕಣ್ಣಿನ ಆರೋಗ್ಯದ ಪೌಷ್ಠಿಕಾಂಶಗಳನ್ನು ಬೆರೆಸುವುದು
* ಕಣ್ಣು ಅಗಲಿಸುವ ವ್ಯಾಯಾಮ ಮಾಡುವುದು
* ಅಗತ್ಯವಿದ್ದರೆ ಕೃತಕ ಕಣ್ಣೀರುಗಳನ್ನು ಬಳಸುವುದು
* ಪರದೆಯ ಸಮಯ ಕಡಿಮೆ ಮಾಡುವುದು
* ಡಿಜಿಟಲ್ ಸಾಧನಗಳ ಫಾಂಟ್ ಗಾತ್ರ ಹೆಚ್ಚಿಸುವುದು
ತಂತ್ರಜ್ಞಾನಗಳು ನಮ್ಮ ಜೀವನವನ್ನು ಪರಿವರ್ತಿಸಿದ್ದರೂ, ದೀರ್ಘಕಾಲೀನ ಪರಿಣಾಮಗಳನ್ನು ತಡೆಗಟ್ಟಲು ಕಣ್ಣಿನ ಆರೈಕೆಗೆ ಆದ್ಯತೆ ನೀಡುವುದು ಅತ್ಯಗತ್ಯ.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್







