ಒಂದು ತಿಂಗಳು ಬೆಳಗ್ಗೆ ಎದ್ದ ತಕ್ಷಣ ಎಳನೀರು ಕುಡಿದರೆ ಏನಾಗುತ್ತದೆ?

ಸಾಂದರ್ಭಿಕ ಚಿತ್ರ | Photo Credit : freepik.com
ಎಳನೀರು ಕುಡಿಯುವುದರಿಂದ ದಿನದ ಆರಂಭದಲ್ಲೇ ಫ್ಲೂಯಿಡ್ ಸಮತೋಲನಕ್ಕೆ ನೆರವಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಅಥವಾ ಜಡವಾದ ಅನುಭವ ಇರುವುದಿಲ್ಲ!
ಬೆಳಗಿನ ಜಾವ ಎದ್ದ ತಕ್ಷಣ ದೇಹದಲ್ಲಿ ನೀರಿನಂಶದ ಕೊರತೆ ಇರುತ್ತದೆ. ಆದರೆ ನೀರು ಅಥವಾ ಕೆಫೈನ್ ಬದಲಾಗಿ ನೀವು ನಿತ್ಯವೂ ಎಳನೀರು ಕುಡಿದರೆ ಏನಾಗುತ್ತದೆ? ಮುಂಬೈನ ಥಾಣೆಯಲ್ಲಿರುವ ಕಿಮ್ಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾಗಿರುವ ಡಾ. ಅಮ್ರೀನ್ ಶೇಖ್ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
“ಎಳನೀರು ಕುಡಿಯುವುದರಿಂದ ದೇಹದಲ್ಲಿ ತ್ವರಿತವಾಗಿ ನೀರಿನಂಶ ತುಂಬಲು ನೆರವಾಗುತ್ತದೆ. ಏಕೆಂದರೆ ಅದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂನಂತಹ ಸಹಜವಾದ ಎಲೆಕ್ಟ್ರೊಲೈಟ್ಗಳು ಇರುತ್ತವೆ. ಇವು ದಿನದ ಆರಂಭದಲ್ಲೇ ಫ್ಲೂಯಿಡ್ ಸಮತೋಲನಕ್ಕೆ ನೆರವಾಗುತ್ತವೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಅಥವಾ ಜಡವಾದ ಅನುಭವ ಇರುವುದಿಲ್ಲ” ಎನ್ನುತ್ತಾರೆ ಅಮ್ರೀನ್.
ಲಘು ಆಹಾರ ಎಳನೀರು
ಎಳನೀರು ಲಘುವಾದ ಮತ್ತು ಸೌಮ್ಯವಾದ ಆಹಾರ. ಬೆಳಗಿನ ಜಾವ ಎಳನೀರು ಕುದಿದಾಗ ಜೀರ್ಣಕ್ರಿಯೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ವಾರಗಳಲ್ಲಿಯೇ ಬದಲಾವಣೆ ಕಾಣಿಸುತ್ತದೆ. ಕೆಲವರ ಹೊಟ್ಟೆ ಕಡಿಮೆ ಉಬ್ಬರಿಸಿರುತ್ತದೆ. ಕರುಳಿನ ಚಲನೆ ಸರಾಗವಾಗಿ ಆಗುತ್ತದೆ. ಉತ್ತಮ ನೀರಿನಂಶವು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಜೀವಕೋಶಗಳಲ್ಲಿ ಜಲಸಂಚಯನವನ್ನು ಉತ್ತೇಜಿಸುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ಹೆಚ್ಚು ಪರಿಣಾಮಕಾರಿಯಾಗಿ ದೇಹಾದ್ಯಂತ ಹರಿಯಲು ನೆರವಾಗುತ್ತದೆ.
“ಹಠಾತ್ ಉತ್ತೇಜನಗೊಂಡು ನಂತರ ಬರಿದಾಗುವ ಬದಲಾಗಿ ಸ್ಥಿರವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗಲಿದೆ” ಎನ್ನುತ್ತಾರೆ ಅಮ್ರೀನ್.
ರಕ್ತದೊತ್ತಡ ಮತ್ತು ಹೃದಯ ಆರೋಗ್ಯದ ಮೇಲಿನ ಪರಿಣಾಮ?
ಎಳನೀರಿನಲ್ಲಿ ಸಹಜವಾಗಿ ಪೊಟ್ಯಾಶಿಯಂ ಹೆಚ್ಚಾಗಿರುವುದರಿಂದ ಸೋಡಿಯಂನ ಸಮತೋಲನಕ್ಕೆ ನೆರವಾಗುತ್ತದೆ. ನಿತ್ಯವೂ ಸೇವಿಸುವುದರಿಂದ ಆರೋಗ್ಯಕರವಾದ ರಕ್ತದೊತ್ತಡಕ್ಕೆ ಬಲ ನೀಡುತ್ತದೆ. ಹಣ್ಣು ಮತ್ತು ತರಕಾರಿಗಳಿಂದ ಸಾಕಷ್ಟು ಪೊಟ್ಯಾಶಿಯಂ ಸಿಗದವರಿಗೆ ಎಳನೀರು ಮುಖ್ಯವಾಗುತ್ತದೆ.
ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರಲಿದೆಯೆ?
ಉತ್ತಮ ಜಲಸಂಚಯನದ ಪರಿಣಾಮ ಹೊರಗೆ ಕೂಡ ಕಾಣಿಸಿಕೊಳ್ಳುತ್ತದೆ. ಕೆಲವು ವಾರಗಳಲ್ಲೇ ಚರ್ಮದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ ಮತ್ತು ತುಟಿಗಳು ಹೆಚ್ಚು ಒಣಗಿದಂತೆ ಇರುವುದಿಲ್ಲ. ಇದೇನು ಮಾಂತ್ರಿಕ ಬದಲಾವಣೆಯಲ್ಲ. ಸುಧಾರಿತ ಜಲಸಂಚಯನ ಮತ್ತು ಖನಿಜಗಳ ಸಮತೋಲನದ ಪರಿಣಾಮವಾಗಿರುತ್ತದೆ ಎನ್ನುತ್ತರೆ ಅಮ್ರೀನ್.
ತೂಕ ಕಡಿಮೆ ಮಾಡಲು ಎಳನೀರು ಸಹಕಾರಿಯೆ?
ಎಳನೀರು ಕೊಬ್ಬನ್ನು ತನ್ನಷ್ಟಕ್ಕೇ ಕರಗಿಸುವುದಿಲ್ಲ. ಬೆಳಗಿನ ಸಮಯದಲ್ಲಿ ಸಕ್ಕರೆ ಬೆರೆಸಿದ ಪಾನೀಯಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜಲಸಂಚಯನ ಸುಧಾರಿಸುತ್ತಿದ್ದಂತೆ ಹೊಟ್ಟೆಯ ಸಂಕೇತಗಳೂ ಸ್ಪಷ್ಟವಾಗಿಬಿಡುತ್ತವೆ. ಅದರಿಂದ ತನ್ನಿಂತಾನಾಗೇ ಉತ್ತಮ ಆಹಾರ ಆಯ್ಕೆಗಳತ್ತ ತಿರುಗುತ್ತೇವೆ ಎನ್ನುತ್ತರೆ ಅಮ್ರೀನ್.
ಏನನ್ನು ಗಮನಿಸಬೇಕು?
ಬಹಳಷ್ಟು ಮಂದಿಗೆ ಬೆಳಗಿನ ಜಾವ ಎಳನೀರು ಸೇವಿಸುವುದು ಉತ್ತಮ. ಆದರೆ ಮೂತ್ರಪಿಂಡದ ಸಮಸ್ಯೆ ಇರುವವರು ಅಥವಾ ಪೊಟ್ಯಾಶಿಯಂ ಮಟ್ಟ ಹೆಚ್ಚಾಗುವ ಸಮಸ್ಯೆ ಇರುವವರು ಜಾಗರೂಕತೆ ವಹಿಸಬೇಕಾಗುತ್ತದೆ. ಮಧುಮೇಹ ಇರುವವರು ನೈಸರ್ಗಿಕವಾದ ಸಕ್ಕರೆ ಪಾನೀಯವಾಗಿರುವ ಎಳನೀರು ಸೇವಿಸುವ ಪ್ರಮಾಣವನ್ನು ಗಮನಿಸಬೇಕಾಗುತ್ತದೆ.
ಒಂದು ಗ್ಲಾಸ್ (200-250 ಮಿಲೀ) ಎಳನೀರು ಸಾಕಾಗುತ್ತದೆ. ಸಕ್ಕರೆ ಹೊಂದಿರುವ ಬೆಳಗಿನ ಪಾನೀಯದ ಬದಲಾಗಿ ಸೇವಿಸುವಾಗ ಉತ್ತಮ ಪರಿಣಾಮ ಬೀರುತ್ತದೆ. ಬದಲಾಗಿ ಬೆಳಗಿನ ಸಮಯದಲ್ಲಿ ಅತಿಯಾದ ಸಕ್ಕರೆ ಸೇವಿಸಿ ಅದರ ಮೇಲೆ ಎಳನೀರು ಸೇವಿಸುವುದು ಉತ್ತಮ ಪರಿಣಾಮ ಬೀರದು. ಸಿಹಿ ಬೆರೆಸದ ತಾಜಾ ಎಳನೀರು ಉತ್ತಮ ಆಯ್ಕೆಯಾಗಿರುತ್ತದೆ.
30 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ಜಲಸಂಚಯನ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬೆಳಗಿನ ಸಮಯದಲ್ಲಿ ತಾಜಾತನ ನಿಡುತ್ತದೆ. ಸಮತೋಲಿತ ಜೀವನಶೈಲಿಯ ಜೊತೆಗೂಡಿ ಸೇವಿಸಿದರೆ ನಿಜವಾದ ಲಾಭ ಸಿಗಲಿದೆ ಎನ್ನುತ್ತಾರೆ ಅಮ್ರೀನ್.
ಕೃಪೆ: indianexpress.com







