ಊಟ ಮಾಡುವಾಗ ನೀರು ಕುಡಿಯಬಾರದೆ?

ಸಾಂದರ್ಭಿಕ ಚಿತ್ರ | Photo Credit : magnific
ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟಾಲಜಿಸ್ಟ್ ಆಗಿರುವ ಡಾ ಶುಭಂ ವತ್ಸ್ಯ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಕರುಳಿಗೆ ಸಂಬಂಧಿಸಿದ ಆರು ಮೌಢ್ಯಗಳ ಬಗ್ಗೆ ತಿಳಿ ಹೇಳಿದ್ದಾರೆ.
ಕರುಳಿನ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಒಟ್ಟು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಭಾಗವಾಗಿದೆ. ಬಹುತೇಕ ಆರೋಗ್ಯ ಮೌಢ್ಯಗಳೂ ಕರುಳಿಗೆ ಸಂಬಂಧಿಸಿಯೇ ಪ್ರಚಾರವಾಗುತ್ತವೆ. ಮೇ 30ರಂದು ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟಾಲಜಿಸ್ಟ್ ಡಾ ಶುಭಂ ವತ್ಸ್ಯ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಕರುಳಿಗೆ ಸಂಬಂಧಿಸಿದ ಆರು ಮೌಢ್ಯಗಳ ಬಗ್ಗೆ ತಿಳಿ ಹೇಳಿದ್ದಾರೆ.
ನಿಂಬೆ ನೀರಿನ ಡಿಟಾಕ್ಸ್
ಆರೋಗ್ಯ ಮತ್ತು ಫಿಟ್ನೆಸ್ ಉತ್ಸಾಹಿಗಳು ನಂಬುವ ನಿಂಬೆ ನೀರಿನ ಡಿಟಾಕ್ಸ್ ಸುಳ್ಳೆಂದು ಅವರು ಹೇಳಿದ್ದಾರೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ ಎಂದು ನಂಬಲಾಗಿದೆ. ಆದರೆ ಡಾ ವತ್ಸ್ಯ ಪ್ರಕಾರ ಈ ಹೇಳಿಕೆ ಮೌಢ್ಯವಾಗಿದೆ. ದೇಹವು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಒಳಗೊಂಡಿರುವ ತನ್ನದೇ ಆದ ಡಿಟಾಕ್ಸ್ ಕಾರ್ಯವಿಧಾನ ಹೊಂದಿದ್ದು, ಅದು 24 ಗಂಟೆ ಕೆಲಸ ಮಾಡುತ್ತದೆ.
ದೈನಂದಿನ ಕರುಳಿನ ಚಲನೆ
ಪ್ರತಿದಿನ ತಪ್ಪದೆ ಮಲ-ಮೂತ್ರ ಹೋದರೆ ಉತ್ತಮ ಆರೋಗ್ಯದ ಸೂಚಕ ಎನ್ನುವ ಭಾವನೆ ಹಲವರಲ್ಲಿದೆ. ಹಾಗೆ ಹೋಗದೆ ಇದ್ದಲ್ಲಿ ಮಲಬದ್ಧತೆ ಉಂಟಾಗಿದೆ ಎಂದು ನಂಬುತ್ತಾರೆ. ಆದರೆ ವತ್ಸ್ಯ ಪ್ರಕಾರ ಪ್ರತಿಯೊಬ್ಬರ ವ್ಯಕ್ತಿಯ ಕರುಳು ವಿಭಿನ್ನ ಮಾದರಿಯಲ್ಲಿರುತ್ತದೆ. ಪ್ರತಿದಿನ ಮಲ-ಮೂತ್ರ ಹೋಗದೆ ಇರುವುದು ಮಲಬದ್ಧತೆಯ ಲಕ್ಷಣವಲ್ಲ.
ಆಹಾರದ ಜೊತೆಗೆ ನೀರು ಕುಡಿಯುವುದು
ಮಕ್ಕಳು ಊಟದ ಜೊತೆಗೆ ಹೆಚ್ಚು ನೀರು ಕುಡಿಯುವುದನ್ನು ಪೋಷಕರು ತಡೆಯುತ್ತಾರೆ. ನೀರು ಕುಡಿದರೆ ಹೊಟ್ಟೆಯಲ್ಲಿ ಊಟಕ್ಕೆ ಜಾಗವಿರುವುದಿಲ್ಲ ಎಂದುಕೊಳ್ಳಲಾಗುತ್ತದೆ. ವಯಸ್ಕರಿಗೆ ನೀರು ಜೀರ್ಣಕ್ರಿಯೆಗೆ ಹಾನಿ ಮಾಡುತ್ತದೆ ಎಂದು ನಂಬಲಾಗುತ್ತದೆ. ವತ್ಸ್ಯ ಅವರ ಪ್ರಕಾರ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಹಾಳಾಗುವುದಿಲ್ಲ. ಬದಲಾಗಿ ಅತಿಯಾಗಿ ತಿನ್ನುವುದು ಮತ್ತು ತುಂಬಾ ವೇಗವಾಗಿ ತಿನ್ನುವುದು ಚಯಾಪಚಯ ಕ್ರಿಯೆಗೆ ಹೆಚ್ಚು ಹಾನಿಕಾರಕವಾಗಿರುತ್ತದೆ.
ಮಸಾಲೆಯುಕ್ತ ಆಹಾರ ಮತ್ತು ಅಲ್ಸರ್ಗಳು
ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅಲ್ಸರ್ ಉಂಟಾಗುತ್ತದೆ ಎಂದು ನಂಬಲಾಗುತ್ತದೆ. ಆದರೆ ಇದು ಸಂಪೂರ್ಣ ಸುಳ್ಳೆನ್ನುತ್ತಾರೆ ಡಾ ವತ್ಸ್ಯ. ಅವರ ಪ್ರಕಾರ, ಅಲ್ಸರ್ಗಳಿಗೆ ಮುಖ್ಯ ಕಾರಣದಲ್ಲಿ ಎಚ್. ಪೈಲೊರಿ ಮತ್ತು ನೋವು ನಿವಾರಕಗಳು, ಸ್ಟಿರಾಯ್ಡ್ ಇಲ್ಲದ ಉರಿಯೂತದ ಔಷಧಗಳು ಸೇರಿವೆ. “ಮಸಾಲೆಯುಕ್ತ ಆಹಾರದಿಂದ ಅಲ್ಸರ್ ಸಾಧ್ಯತೆ ಹೆಚ್ಚಾಗಬಹುದಾದರೂ, ಅವು ಕಾರಣವಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
ರಾತ್ರಿ ಮೊಸರು ತಿನ್ನಬಾರದು
ವಿಶೇಷವಾಗಿ ವಯಸ್ಸಾದವರಲ್ಲಿ ಸಾಮಾನ್ಯವಾಗಿ ರಾತ್ರಿ ಮೊಸರು ಸೇವಿಸುವುದು ಹಾನಿಕಾರಕ ಎನ್ನುವ ನಂಬಿಕೆಯಿದೆ. ಈ ಹೇಳಿಕೆಗೆ ಆಧಾರವಿಲ್ಲ ಮತ್ತು ಅಂತಹ ಸಲಹೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.
ಫ್ಯಾಟಿ ಲಿವರ್ ಮತ್ತು ಮದ್ಯಪಾನ
ಫ್ಯಾಟಿ ಲಿವರ್ಗೆ ಮದ್ಯಪಾನವೇ ಏಕೈಕ ಕಾರಣ ಎಂದು ನಂಬಲಾಗುತ್ತದೆ. ಅದು ಮೌಢ್ಯ ಎಂದು ವತ್ಸ್ಯ ಹೇಳಿದ್ದಾರೆ. ಅವರ ಪ್ರಕಾರ, “ಮಧುಮೇಹ ಮತ್ತು ಬೊಜ್ಜಿನಿಂದ ಉಂಟಾಗುವ ಮದ್ಯಪಾನವಲ್ಲದ ಫ್ಯಾಟಿ ಲಿವರ್ ರೋಗಗಳಿವೆ. ಭಾರತದಲ್ಲಿ ಮದ್ಯಪಾನವಲ್ಲದ ಫ್ಯಾಟಿ ಲಿವರ್ ಮದ್ಯಪಾನ ಯುಕ್ತ ಫ್ಯಾಟಿ ಲಿವರ್ಗಿಂತ ಹೆಚ್ಚು ಸಾಮಾನ್ಯವಾಗಿದೆ.”
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿಯಿಂದ ಬರೆಯಲಾಗಿದೆ. ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಕರುಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.






