ಪ್ರತಿದಿನ ಅನ್ನ–ಸಾಂಬಾರ್ ಸೇವನೆ ಆರೋಗ್ಯಕರವೇ?

ಸಾಂದರ್ಭಿಕ ಚಿತ್ರ | Photo Credit : freepik
ಸಮತೋಲಿತ ಆಹಾರವನ್ನು ನಿರ್ವಹಿಸದೆ ಬರೀ ಅನ್ನ–ಸಾಂಬಾರ್ ನಿತ್ಯವೂ ಸೇವಿಸಿದರೆ ಸಮಸ್ಯೆಯಾಗಬಹುದು.
ಅನ್ನ–ಸಾಂಬಾರ್ ಭಾರತದ ಅನೇಕ ಮನೆಗಳಲ್ಲಿ ಬಹಳ ಅನುಕೂಲಕರವಾದ ಆಹಾರ. ಅಕ್ಕಿ, ಧಾನ್ಯಗಳು, ತರಕಾರಿಗಳು ಮತ್ತು ಮಸಾಲೆಗಳಿಂದ ತಯಾರಿಸಲಾದ ಈ ಖಾದ್ಯವನ್ನು ಬಹುತೇಕ ಪೂರ್ಣ ಊಟ ಎಂದು ಪರಿಗಣಿಸಲಾಗುತ್ತದೆ. ಎಣ್ಣೆಮಯ ಮತ್ತು ಸಂಸ್ಕರಿತ ಆಹಾರಗಳಿಗಿಂತ ಇದು ಆರೋಗ್ಯಕರ ಎಂಬ ಅಭಿಪ್ರಾಯವೂ ಇದೆ. ಆದರೆ ನಿತ್ಯವೂ ಅನ್ನ–ಸಾಂಬಾರ್ ಸೇವಿಸುವುದು ನಿಜವಾಗಿಯೂ ಆರೋಗ್ಯಕರವೇ?
ಅನ್ನ–ಸಾಂಬಾರ್ ಸೇವನೆಯಲ್ಲಿ ತಪ್ಪಿಲ್ಲ
ತಜ್ಞರ ಪ್ರಕಾರ ಅನ್ನ–ಸಾಂಬಾರ್ ಸೇವಿಸುವುದೇ ತಪ್ಪಲ್ಲ; ಅದನ್ನು ಹೇಗೆ ಮತ್ತು ಯಾವ ಪ್ರಮಾಣದಲ್ಲಿ ಸೇವಿಸಲಾಗುತ್ತದೆ ಎಂಬುದೇ ಮುಖ್ಯ. “ನಿಯಮಿತವಾಗಿ ಅನ್ನ–ಸಾಂಬಾರ್ ಸೇವಿಸುವುದು ಅಷ್ಟೇನು ಅನಾರೋಗ್ಯಕರವಲ್ಲ. ಬಹಳಷ್ಟು ಕರಿದ ಹಾಗೂ ಸಂಸ್ಕರಿತ ಆಹಾರಗಳಿಗಿಂತ ಇದು ಉತ್ತಮ ಆಯ್ಕೆ. ಆದರೆ ಸಮತೋಲಿತ ಆಹಾರವನ್ನು ಪಾಲಿಸದೆ ಬರೀ ಅನ್ನ–ಸಾಂಬಾರ್ನ್ನೇ ನಿತ್ಯವೂ ಸೇವಿಸಿದರೆ ಸಮಸ್ಯೆಗಳು ಎದುರಾಗಬಹುದು. ದೊಡ್ಡ ಪ್ರಮಾಣದ ಅನ್ನ ಮತ್ತು ಕೆಲವೇ ತರಕಾರಿಗಳೊಂದಿಗೆ ನೀರಸ ಸಾಂಬಾರ್ ಸೇವನೆಯಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ,” ಎಂದು ತಜ್ಞರು ಹೇಳುತ್ತಾರೆ.
ಪೌಷ್ಟಿಕಾಂಶಯುಕ್ತ ಅನ್ನ–ಸಾಂಬಾರ್ ನಲ್ಲಿ ಅನ್ನದ ಜೊತೆಗೆ ತರಕಾರಿಗಳೂ ಮಿಶ್ರಿತವಾಗಿರುತ್ತವೆ.
ನಿತ್ಯ ಸೇವನೆಯಿಂದ ಖನಿಜಗಳ ಕೊರತೆ
ಇತರ ಆಹಾರಗಳಿಲ್ಲದೆ ಪ್ರತಿದಿನ ಅನ್ನ–ಸಾಂಬಾರ್ ಸೇವಿಸುವುದರಿಂದ ಕಾಲಕ್ರಮೇಣ ಪೌಷ್ಟಿಕಾಂಶಗಳ ಕೊರತೆ ಉಂಟಾಗಬಹುದು. ಏಕೆಂದರೆ ಅನ್ನ–ಸಾಂಬಾರ್ ನಿಂದ ಎಲ್ಲಾ ಅಗತ್ಯ ವಿಟಮಿನ್ಗಳು ಮತ್ತು ಖನಿಜಗಳು ದೇಹಕ್ಕೆ ಸಿಗುವುದಿಲ್ಲ. ವಿಶೇಷವಾಗಿ ವಿಟಮಿನ್ ಬಿ12, ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಸತುವಿನ ಕೊರತೆಯೂ ಕಂಡುಬರಬಹುದು.
“ಯೋಗರ್ಟ್, ಸೋಯಾ ಹಾಲು, ಹಣ್ಣುಗಳು, ಕಡಲೆಕಾಯಿ ಅಥವಾ ಬೀಜಗಳನ್ನು ಆಹಾರದಲ್ಲಿ ಸೇರಿಸದಿದ್ದರೆ ದೇಹಕ್ಕೆ ಅಗತ್ಯವಿರುವ ಮೈಕ್ರೋನ್ಯೂಟ್ರಿಯಂಟ್ಗಳು ದೊರಕುವುದಿಲ್ಲ,” ಎಂದು ತಜ್ಞರು ಎಚ್ಚರಿಸುತ್ತಾರೆ.
ಈ ಖನಿಜಗಳ ಕೊರತೆಯಿಂದ ಕಾಲಕ್ರಮೇಣ ಸುಸ್ತು, ಕೂದಲು ಉದುರುವುದು, ದೇಹ ನೋವು, ರೋಗನಿರೋಧಕ ಶಕ್ತಿಯ ಕುಗ್ಗುಮುಗ್ಗು ಮತ್ತು ದೌರ್ಬಲ್ಯ ಕಾಣಿಸಿಕೊಳ್ಳಬಹುದು.
ಎಷ್ಟು ಅನ್ನ ಸೇವಿಸುತ್ತೀರಿ ಎನ್ನುವುದು ಮುಖ್ಯ
ತಜ್ಞರ ಪ್ರಕಾರ ದೀರ್ಘಕಾಲೀನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳ್ತಿಗೆ ಅಕ್ಕಿಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಭಾರತೀಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಲು ಬೆಳ್ತಿಗೆ ಅನ್ನದ ಅಧಿಕ ಸೇವನೆಯೂ ಒಂದು ಪ್ರಮುಖ ಕಾರಣ.
“ಅತಿಯಾದ ಬೆಳ್ತಿಗೆ ಅನ್ನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಬಹುದು. ನಿಯಮಿತವಾಗಿ ದೊಡ್ಡ ಪ್ರಮಾಣದಲ್ಲಿ ಅನ್ನ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಇನ್ಸುಲಿನ್ ರೆಸಿಸ್ಟನ್ಸ್ ಮತ್ತು ಅಂತಿಮವಾಗಿ ಮಧುಮೇಹ ಉಂಟಾಗುವ ಸಾಧ್ಯತೆ ಇದೆ,” ಎಂದು ತಜ್ಞರು ಹೇಳಿದ್ದಾರೆ.
ಅನ್ನದ ಜೊತೆಗೆ ಬೇಳೆಕಾಳುಗಳು ಮತ್ತು ತರಕಾರಿಗಳು
ಪ್ರತಿದಿನ ವಿವಿಧ ಬೇಳೆಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಹೆಚ್ಚಿನ ಪೌಷ್ಟಿಕಾಂಶ ಲಾಭಗಳನ್ನು ಪಡೆಯಬಹುದು. ವಿವಿಧ ಬೇಳೆಕಾಳುಗಳು ಮತ್ತು ತರಕಾರಿಗಳಲ್ಲಿ ಅಮಿನೋ ಆಮ್ಲಗಳು, ಫೈಬರ್ ಮತ್ತು ಮೈಕ್ರೋನ್ಯೂಟ್ರಿಯಂಟ್ಗಳು ಸಮೃದ್ಧವಾಗಿವೆ. ಅವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವುದರಿಂದ ದೀರ್ಘಕಾಲೀನ ಆರೋಗ್ಯ ಲಾಭಗಳು ಲಭಿಸುತ್ತವೆ.







