ಮಧ್ಯಾಹ್ನದ ಊಟದ ಬಳಿಕ ನಿದ್ರೆಗೆ ಜಾರುವುದು ಅನಾರೋಗ್ಯಕರ ಹವ್ಯಾಸ

Photo Credit : freepik.com
ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ.
ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ರೆಗೆ ಜಾರಬೇಕು ಎಂದು ಅನಿಸುತ್ತದೆಯೆ? ಸಣ್ಣ ನಿದ್ರೆ ಮಾಡಿದರೆ ದೇಹದ ಶಕ್ತಿ ಮರಳಿಬರುತ್ತದೆ ಎಂದು ಸಹಜವಾಗಿ ನಿದ್ರೆಗೆ ಜಾರುತ್ತೀರೇನು? ಆದರೆ ಮಧ್ಯಾಹ್ನದ ನಿದ್ರೆ ದಣಿವಿನ ಭಾಗವಾಗಿರಬಹುದು ಎಂದು ಭಾವಿಸಿ ಸುಮ್ಮನಿರಬಾರದು. ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ. ಈ ಸಮಸ್ಯೆಯಿಂದಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಮಧ್ಯಾಹ್ನ 1ರಿಂದ 3ರ ನಡುವೆ ನಿದ್ರೆಗೆ ಜಾರುವ ಹವ್ಯಾಸ ಬೆಳೆಯಬಹುದು.
ಡಾ. ಬಾತ್ರಾಸ್ ಆರೋಗ್ಯಸೇವೆ ಸರಣಿಯನ್ನು ಸ್ಥಾಪಿಸಿರುವ ಡಾ. ಮುಖೇಶ್ ಬಾತ್ರಾ ಅವರ ಪ್ರಕಾರ, “ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗಿನ ಅವಧಿಯು ದೇಹಕ್ಕೆ ಜೈವಿಕವಾಗಿ ತುಂಬಾ ಸವಾಲಿನ ಸಮಯ. ನಮ್ಮ ಸಿರ್ಕಾಡಿಯನ್ ಲಯವು ಸ್ವಾಭಾವಿಕವಾಗಿ ಕುಸಿಯುವ ಹಂತವಾಗಿರುತ್ತದೆ. ಅಂತಹ ಕುಸಿತದಿಂದ ಜಾಗೃತಿ, ಚಯಾಪಚಯ ಮತ್ತು ಮೈಕ್ರೋಸರ್ಕ್ಯುಲೇಷನ್ ಮೇಲೆ ಪರಿಣಾಮ ಬೀರುತ್ತದೆ.”
“ಮಧ್ಯಾಹ್ನದ ಆಲಸ್ಯದ ಸಮಯದಲ್ಲಿ ದೇಹದ ರಕ್ತಪರಿಚಲನೆ ಕಡಿಮೆಯಾಗಿರುತ್ತದೆ. ಜಲಸಂಚಯನ ಕಡಿಮೆಯಾಗಿದ್ದು, ಒತ್ತಡದ ಹಾರ್ಮೋನುಗಳು ಹೆಚ್ಚು ಇರುವುದರಿಂದ ಚರ್ಮವು ಮಂದವಾಗಿ ದಣಿದಂತೆ ಇದ್ದು, ಮೊಡವೆಗಳಿಗೆ ಹೆಚ್ಚು ಒಳಗಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಪೋಸ್ಟ್ಪ್ರಾನ್ಡಿಯಲ್ ಡಿಪ್
ಊಟದ ನಂತರ ನಿದ್ರೆ ಬರುವಿಕೆಯನ್ನು “ಪೋಸ್ಟ್ಪ್ರಾನ್ಡಿಯಲ್ ಡಿಪ್” ಎಂದು ಕರೆಯಲಾಗುತ್ತದೆ. ಅಂದರೆ, ಊಟದ ನಂತರ ನಿದ್ರೆ, ಶಕ್ತಿ ಕಡಿಮೆಯಾಗುವುದು ಅಥವಾ ಆಲಸ್ಯದಂತಹ ಸಾಮಾನ್ಯ ಭಾವನೆ. ಇದನ್ನು ಆಹಾರ ಕೋಮಾ ಎಂದೂ ಕರೆಯಲಾಗುತ್ತದೆ. ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಗಳು ಮತ್ತು ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುತ್ತದೆ, ಇದು ಮಾನಸಿಕ ಜಾಗೃತಿ ಮತ್ತು ಗಮನ ಕಡಿಮೆಯಾಗಲು ಕಾರಣವಾಗುತ್ತದೆ.
ನಿದ್ರೆ ಜಾರದಿರಲು ಏನು ಮಾಡಬೇಕು?
ಲವ್ನೀತ್ ಎನ್ನುವ ನ್ಯೂಟ್ರಿಶನ್ ಕಂಪನಿಯ ಸ್ಥಾಪಕರಾದ ಲವ್ನೀತ್ ಬಾತ್ರ ಪ್ರಕಾರ, “ಈ ಸಮಯದಲ್ಲಿ ಜನರು ಹೆಚ್ಚಾಗಿ ಅರೆನಿದ್ರಾವಸ್ಥೆಯಲ್ಲಿರುತ್ತಾರೆ. ಹೆಚ್ಚಿನ ಉಪ್ಪು, ಕಾರ್ಬೋಹೈಡ್ರೇಟ್ ಊಟ, ಅನಿಯಮಿತ ನಿದ್ರೆಯ ಮಾದರಿಗಳು, ಮಲಗುವ ಮುನ್ನ ಅತಿಯಾಗಿ ಫೋನ್ ಬಳಕೆ ಮತ್ತು ರಾತ್ರಿ ಸಮಯದಲ್ಲಿ ನಿಯಮಿತವಾದ ನಿದ್ರೆ ಇಲ್ಲದಿರುವುದು ಕಾರಣವಾಗಬಹುದು. ನಿದ್ರೆಯನ್ನು ಉತ್ತೇಜಿಸುವ ಮೆಲಟೋನಿನ್ನಂತಹ ಹಾರ್ಮೋನುಗಳೂ ಪ್ರಮುಖ ಪಾತ್ರವಹಿಸುತ್ತವೆ. ಈ ಅಂಶಗಳು, ಭಾರೀ ಊಟದೊಂದಿಗೆ ಸೇರಿ, ಮಧ್ಯಾಹ್ನದ ವೇಳೆಯಲ್ಲಿ ನಿದ್ರೆ ಮಾಡಲು ಪ್ರಚೋದನೆ ನೀಡುತ್ತವೆ ಮತ್ತು ಇದು ಉತ್ಪಾದಕತೆಗೆ ಅಪಾಯಕಾರಿ.”
ಅವರು ನೀಡುವ ಪರಿಹಾರವೆಂದರೆ ಬೆಳಗಿನ ಉಪಾಹಾರವನ್ನು ಚೆನ್ನಾಗಿ ಮಾಡುವುದು. ಸಿರಿಧಾನ್ಯ, ಬ್ರೌನ್ ರೈಸ್ ಅವಲಕ್ಕಿ, ಬ್ರೌನ್ರೈಸ್ ಇಡ್ಲಿಗಳು ಅಥವಾ ದೋಸೆಯನ್ನು ಬೆಳಗಿನ ಉಪಾಹಾರಕ್ಕೆ ಸೇವಿಸಬೇಕು. ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿರುವ ತಿನಿಸುಗಳನ್ನು ಸೇವಿಸಬೇಕು. ನಿದ್ರೆ ಬರುವುದನ್ನು ತಡೆಯಲು ಚಹಾ ಅಥವಾ ಕಾಫಿ ಸೇವನೆ, ತಂಪು ಪಾನೀಯ ಅಥವಾ ಬಿಸ್ಕಟ್ಗಳು ಮೊದಲಾದ ತಿನಿಸುಗಳನ್ನು ಸೇವಿಸಬಾರದು.
3 ಗಂಟೆಯ ನಿದ್ರೆ ತಡೆಯಲು ಇವನ್ನು ಸೇವಿಸಬಹುದು
- ಮೊಳಕೆಕಾಳುಗಳು ಪ್ರೊಟೀನ್ ಮತ್ತು ಫೈಬರ್ ಮೂಲಗಳಾಗಿರುತ್ತವೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ.
- ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ.
- ಹಣ್ಣುಗಳೊಂದಿಗೆ ನೆನೆಸಿದ ಬೀಜಗಳನ್ನು ಸಂಯೋಜಿಸುವುದರಿಂದ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಮಿಶ್ರಣವನ್ನು ಒದಗಿಸುವ ಮೂಲಕ ತ್ವರಿತ ಶಕ್ತಿ ಮತ್ತು ದೀರ್ಘಕಾಲದ ತೃಪ್ತಿ ಸಿಗುತ್ತದೆ.
- ಬೇಯಿಸಿದ ಕಡಲೆ (ಚನಾ) ಪ್ರೊಟೀನ್ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಆಯಾಸ ಕಳೆಯಲು ಪೌಷ್ಠಿಕಾಂಶವಿರುವ ಹೊಟ್ಟೆ ತುಂಬಿಸುವ ತಿನಿಸಾಗಿದೆ.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್







