ದಿನಪತ್ರಿಕೆಯಲ್ಲಿ ಆಹಾರ ಕಟ್ಟುವುದು ಕಾನೂನುಬಾಹಿರ; FSSAI ಎಚ್ಚರಿಕೆ ನೀಡಿರುವುದೇಕೆ?

Screengrab : @fssaiindia
ಬೀದಿ ವ್ಯಾಪಾರಿಗಳಿಂದ ಹಿಡಿದು ರೆಸ್ಟೊರೆಂಟ್ಗಳು ಮತ್ತು ಕ್ಲೌಡ್ ಕಿಚನ್ ಗಳವರೆಗೆ ಎಲ್ಲಾ ಆಹಾರ ವ್ಯವಹಾರಗಳು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಅನುಮೋದಿತ ಆಹಾರ-ದರ್ಜೆಯ ಪ್ಯಾಕೇಜಿಂಗ್ ಸಾಮಗ್ರಿಗಳನ್ನೇ ಬಳಸಬೇಕು ಎಂದು FSSAI ನಿರ್ದೇಶಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ ಜನಪ್ರಿಯ ವಡಾ ಪಾವ್ ವ್ಯಾಪಾರಿಯ ವಿರುದ್ಧ ಕ್ರಮ ಕೈಗೊಂಡ ಬಳಿಕ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಆಹಾರವನ್ನು ಪ್ಯಾಕ್ ಮಾಡಲು, ಬಡಿಸಲು ಅಥವಾ ಸಂಗ್ರಹಿಸಲು ದಿನಪತ್ರಿಕೆಗಳನ್ನು ಬಳಸುವುದನ್ನು ನಿಷೇಧಿಸಿದೆ. ದಿನಪತ್ರಿಕೆಯ ಶಾಯಿಯಲ್ಲಿ ಭಾರ ಲೋಹಗಳು ಸೇರಿದಂತೆ ಹಾನಿಕಾರಕ ರಾಸಾಯನಿಕಗಳು ಇರುವ ಬಗ್ಗೆ ಆಹಾರ ನಿಯಂತ್ರಕ ಎಚ್ಚರಿಕೆ ನೀಡಿದೆ.
ವಿಶೇಷವಾಗಿ ತಿನಿಸು ಬಿಸಿಯಾಗಿದ್ದರೆ, ಎಣ್ಣೆಮಯವಾಗಿದ್ದರೆ ಅಥವಾ ತೇವಾಂಶದಿಂದ ಕೂಡಿದ್ದರೆ, ಈ ಹಾನಿಕಾರಕ ರಾಸಾಯನಿಕಗಳು ಆಹಾರಕ್ಕೆ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ದಿನಪತ್ರಿಕೆಗಳನ್ನು ಬಳಸುವುದರಿಂದ ಸೂಕ್ಷ್ಮಜೀವಿಗಳು ರೋಗಗಳನ್ನು ಹರಡಬಹುದು ಎಂದು FSSAI ಎಚ್ಚರಿಸಿದೆ.
ಬೀದಿ ವ್ಯಾಪಾರಿಗಳಿಂದ ಹಿಡಿದು ರೆಸ್ಟೊರೆಂಟ್ ಗಳು ಮತ್ತು ಕ್ಲೌಡ್ ಕಿಚನ್ ಗಳವರೆಗೆ ಎಲ್ಲಾ ಆಹಾರ ವ್ಯವಹಾರಗಳು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಅನುಮೋದಿತ ಆಹಾರ-ದರ್ಜೆಯ ಪ್ಯಾಕೇಜಿಂಗ್ ಸಾಮಗ್ರಿಗಳನ್ನೇ ಬಳಸಬೇಕು ಎಂದು FSSAI ನಿರ್ದೇಶಿಸಿದೆ.
ದಿನಪತ್ರಿಕೆ ಏಕೆ ಅಪಾಯಕಾರಿ?
ಮಾಧ್ಯಮಗಳಿಗೆ ವಿವರ ನೀಡಿರುವ ತಜ್ಞರ ಪ್ರಕಾರ, ಪತ್ರಿಕೆಯ ಮುದ್ರಣದಲ್ಲಿ ಬಳಸಲಾಗುವ ಶಾಯಿಯು ದ್ರಾವಕಗಳು, ವರ್ಣದ್ರವ್ಯಗಳು, ಬೈಂಡರ್ ಗಳು ಮತ್ತು ಸೇರ್ಪಡೆಗಳ ಸಂಕೀರ್ಣ ಮಿಶ್ರಣವನ್ನು ಹೊಂದಿರುತ್ತದೆ. ಮುದ್ರಣ ಶಾಯಿಯಲ್ಲಿ ಹೆಚ್ಚಾಗಿ ಸೀಸ, ಕ್ರೋಮಿಯಂ ಮತ್ತು ಕ್ಯಾಡ್ಮಿಯಂನಂತಹ ಭಾರ ಲೋಹಗಳಿರುತ್ತವೆ. ಹೆಚ್ಚುವರಿಯಾಗಿ, ಥಾಲೇಟ್ ಗಳು, ಖನಿಜ ತೈಲಗಳು ಮತ್ತು ವಿವಿಧ ಕೃತಕ ಬಣ್ಣಗಳನ್ನು ಬಳಸಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಸಾಯನಿಕಗಳು ಆಹಾರಕ್ಕೆ ಏಕೆ ಹಾನಿಕರ?
ಪತ್ರಿಕೆಗಳು ವಡಾ ಪಾವ್, ಸಮೋಸ, ಪಕೋಡ ಅಥವಾ ಇತರ ಹುರಿದ ತಿಂಡಿಗಳಂತಹ ಬಿಸಿ ಮತ್ತು ಎಣ್ಣೆಯುಕ್ತ ಆಹಾರಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಪಾಯ ಹೆಚ್ಚಾಗುತ್ತದೆ. ಹೀಗೆ ಹುರಿದ ತಿಂಡಿಗಳು ಅಥವಾ ತೇವಾಂಶವಿರುವ ಆಹಾರದೊಂದಿಗೆ ಸಂಪರ್ಕಕ್ಕೆ ಬಂದಾಗ, ಶಾಖ ಮತ್ತು ಲಿಪಿಡ್ ಗಳು ದ್ರಾವಕಗಳಾಗಿ ಕಾರ್ಯನಿರ್ವಹಿಸಿ ಶಾಯಿಯಲ್ಲಿರುವ ರಾಸಾಯನಿಕಗಳು ಆಹಾರಕ್ಕೆ ಚಲಿಸಲು ಅನುಕೂಲವಾಗಿಸುತ್ತವೆ.
‘ಕೆಮಿಕಲ್ ಮೈಗ್ರೇಶನ್’ ಎಂದು ಕರೆಯಲಾಗುವ ಈ ಪ್ರಕ್ರಿಯೆಯು ಸಂಭಾವ್ಯ ಹಾನಿಕಾರಕ ಪದಾರ್ಥಗಳು ಪತ್ರಿಕೆಯ ಮೇಲ್ಮೈಯಿಂದ ನೇರವಾಗಿ ಸೇವಿಸುವ ಆಹಾರಕ್ಕೆ ವರ್ಗಾವಣೆಯಾಗಲು ಅನುವು ಮಾಡಿಕೊಡುತ್ತದೆ.
ದೀರ್ಘಕಾಲೀನ ಆರೋಗ್ಯ ಅಪಾಯ
ಭಾರ ಲೋಹಗಳನ್ನು ದೀರ್ಘಕಾಲ ಸೇವಿಸುವುದರಿಂದ ಗಂಭೀರ ಪರಿಣಾಮಗಳಾಗಬಹುದು. ಸೀಸ ಮತ್ತು ಇತರ ಭಾರ ಲೋಹಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ವಿಷಕಾರಿ ಪರಿಣಾಮ ಉಂಟಾಗುತ್ತದೆ. ಇದು ನರಮಂಡಲ ಮತ್ತು ಮೂತ್ರಪಿಂಡಗಳ ಕಾರ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಅರಿವಿನ ದುರ್ಬಲತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ತಜ್ಞರ ಪ್ರಕಾರ, ಮುದ್ರಣ ಶಾಯಿಗಳಲ್ಲಿ ಬಳಸುವ ಹಲವಾರು ದ್ರಾವಕಗಳು ಮತ್ತು ಬಣ್ಣಗಳನ್ನು ಸಂಭಾವ್ಯ ಕ್ಯಾನ್ಸರ್ಕಾರಕಗಳು ಅಥವಾ ಅಂತಃಸ್ರಾವಿ ವ್ಯವಸ್ಥೆಗೆ ಅಡ್ಡಿಪಡಿಸುವ ವಸ್ತುಗಳೆಂದು ಪರಿಗಣಿಸಲಾಗುತ್ತದೆ.
ದಿನಪತ್ರಿಕೆಗಳಲ್ಲಿ ಸೂಕ್ಷ್ಮಜೀವಿಗಳ ಸಾಧ್ಯತೆ
ರಾಸಾಯನಿಕ ಮಾಲಿನ್ಯವು ಒಂದೆಡೆಯಾದರೆ, ಮತ್ತೊಂದೆಡೆ ಪತ್ರಿಕೆಗಳು ರೋಗ ಹರಡುವ ಸೂಕ್ಷ್ಮಜೀವಿಗಳ ವಾಹಕಗಳಾಗಿರಬಹುದು. ಪತ್ರಿಕೆಯು ಮುದ್ರಣಯಂತ್ರದಿಂದ ವಿತರಣಾ ಏಜೆಂಟ್ಗೆ, ಅಲ್ಲಿಂದ ಮಾರಾಟಗಾರರ ಅಂಗಡಿಗೆ ಮತ್ತು ಕೊನೆಗೆ ವ್ಯಾಪಾರಿಯ ಕೈಗೆ ತಲುಪುತ್ತದೆ. ಹೀಗೆ ಅನೇಕ ವ್ಯಕ್ತಿಗಳು ದಿನಪತ್ರಿಕೆಯನ್ನು ನಿರ್ವಹಿಸುವ ಕಾರಣದಿಂದ ಅದು ಧೂಳು ಮತ್ತು ಮಲಿನ ವಸ್ತುಗಳಿಗೆ ಒಡ್ಡಿಕೊಳ್ಳಬಹುದು.
ಪರಿಣಾಮವಾಗಿ, ದಿನಪತ್ರಿಕೆಯ ಮೇಲೆ ರೋಗ ಹರಡುವ ಸೂಕ್ಷ್ಮಜೀವಿಗಳು ಇರಬಹುದು. ಅವು ಆಹಾರಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ವ್ಯಾಪಾರಿಗಳು ಏನು ಬಳಸಬೇಕು?
ಆಹಾರ-ದರ್ಜೆಯ ಪ್ಲೇಟ್ ಗಳು ರಾಸಾಯನಿಕವಾಗಿ ಜಡವಾಗಿರುತ್ತವೆ. ಅಂದರೆ, ಆಹಾರ-ದರ್ಜೆಯ ಕಾಗದ ಮತ್ತು ಕಾರ್ಡ್ಬೋರ್ಡ್ ಪಾತ್ರೆಗಳನ್ನು ಬಳಸಬಹುದು. ಬಾಳೆ ಎಲೆಗಳು ಅಥವಾ ಎಲೆಗಳಿಂದ ತಯಾರಿಸಿದ ತಟ್ಟೆಗಳನ್ನೂ ಬಳಸಬಹುದು. ಕಬ್ಬಿನ ನಾರಿನಿಂದ ತಯಾರಿಸಿದ ಪಾತ್ರೆಗಳನ್ನೂ ಬಳಸಬಹುದು. ಇವು ಉತ್ತಮ ಗೊಬ್ಬರವಾಗಿಯೂ ಉಪಯೋಗವಾಗಬಲ್ಲವು.
ಸೂಚನೆ: ಈ ಲೇಖನವನ್ನು ವಿವಿಧ ಮಾಧ್ಯಮಗಳ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ಇದು ಯಾವುದೇ ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.






