ಕರ್ನಾಟಕದ ಮಾಜಿ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಮೈದಾನದಲ್ಲೇ ಹೃದಯಾಘಾತದಿಂದ ನಿಧನ; ಫಿಟ್ ಅಥ್ಲೀಟ್ಗಳಲ್ಲಿ ಗುಪ್ತವಾಗಿ ಅಡಗಿರುವ ಅಪಾಯಗಳೇನು?

ಎಸ್.ಎಲ್. ಅಕ್ಷಯ್ - Photo Credit : indianexpress
ಕರ್ನಾಟಕದ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಬೆಂಗಳೂರಿನಲ್ಲಿ ಭಾನುವಾರ ಕ್ರಿಕೆಟ್ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವುದು ಅನೇಕ ವೈದ್ಯಕೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಫಿಟ್, ಸಕ್ರಿಯ ಮತ್ತು ಶಿಸ್ತಿನ ಕ್ರೀಡಾಪಟುಗಳು ಹೃದಯಾಘಾತದಿಂದ ಏಕೆ ಕುಸಿಯುತ್ತಿದ್ದಾರೆ?
ಅಕ್ಷಯ್ ಗೆ ಕೇವಲ 39 ವರ್ಷ ವಯಸ್ಸು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 2014–15ರ ರಣಜಿ ಟ್ರೋಫಿ ಗೆದ್ದ ಪೀಳಿಗೆಗೆ ಸೇರಿದ ಅವರು, ಆಟಗಾರ ಮತ್ತು ತರಬೇತುದಾರರಾಗಿ ಆಟದ ಜೊತೆಗೆ ಸಂಪರ್ಕ ಮುಂದುವರಿಸಿದ್ದರು. ರವಿವಾರ ಬೆಳಿಗ್ಗೆ ಕೆಎಸ್ಸಿಎ ಡಿವಿಷನ್–3 ಲೀಗ್ ಪಂದ್ಯದ ವೇಳೆ ನಾಲ್ಕು ಓವರ್ ಬೌಲಿಂಗ್ ಮಾಡಿದ ಬಳಿಕ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ನಂತರ ಅವರು ಅನಾರೋಗ್ಯದ ಕಾರಣದಿಂದ ಮೈದಾನದಿಂದ ಹೊರನಡೆದ ಕೆಲವೇ ಗಂಟೆಗಳಲ್ಲಿ ನಿಧನರಾದರು. ಅವರು ಅಥ್ಲೆಟಿಕ್ ಆಗಿದ್ದರು, ಕ್ರೀಡಾಪಟುವಿನ ಶಿಸ್ತಿಗೆ ಬದ್ಧರಾಗಿದ್ದರು. ಹಾಗಿದ್ದರೂ ಹಠಾತ್ ಹೃದಯಾಘಾತಕ್ಕೆ ಬಲಿಯಾದರು.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ಮುಖ್ಯ ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ಅವರ ಪ್ರಕಾರ, “ಹೃದ್ರೋಗ ತಜ್ಞರಿಗೆ ಇಂತಹ ಸುದ್ದಿಗಳು ಆಶ್ಚರ್ಯ ಉಂಟುಮಾಡುವುದಿಲ್ಲ.” ಅವರ ಮಾತಿನಲ್ಲಿ, “ಬಾಹ್ಯ ಫಿಟ್ನೆಸ್ ಮಾತ್ರ ಹೃದಯದ ಆರೋಗ್ಯಕ್ಕೆ ‘ಕ್ಲೀನ್ ಚಿಟ್’ ಅಲ್ಲ. ಅದು ಅಪಾಯಕಾರಿ ಸರಳೀಕರಣವಾಗಬಹುದು. ಹೃದಯದ ಮೇಲೆ ಒತ್ತಡ ಹೇರುವ ರೋಗ ನಿರ್ಣಯವಾಗದ ಗುಪ್ತ ಅಂಶಗಳು ಇರಬಹುದು. ಭಾರತೀಯರಲ್ಲಿ ಅನುವಂಶೀಯತೆ ದೊಡ್ಡ ಪಾತ್ರ ವಹಿಸುತ್ತದೆ. ಉರಿಯೂತ, ಇನ್ಸುಲಿನ್ ರೆಸಿಸ್ಟನ್ಸ್, ಒತ್ತಡ, ಸಮರ್ಪಕ ಚೇತರಿಕೆ ಇಲ್ಲದಿರುವುದು, ಅತಿಯಾದ ಶ್ರಮದಾಯಕ ಚಟುವಟಿಕೆ, ನಿದ್ರೆಯ ಕೊರತೆ, ನಿಯಂತ್ರಣದಲ್ಲಿರದ ಅಧಿಕ ರಕ್ತದೊತ್ತಡ ಮತ್ತು ಗುಪ್ತ ಆರ್ಟೀರಿಯಲ್ ಪ್ಲೇಕ್ಗಳು ಮೇಲ್ಮೈಯಲ್ಲಿ ಕಾಣಿಸಿಕೊಳ್ಳದೇ ಅಪಾಯ ತರಬಹುದು. ದೇಹ ಸಮಸ್ಯೆ ಎದುರಿಸುವ ಹೊತ್ತಿಗೆ ಹಾನಿ ಸಂಭವಿಸಿರಬಹುದು. ಕೆಲವೊಮ್ಮೆ ಒಳಾಂಗಗಳ ಕೊಬ್ಬು, ಅಸಹಜ ಲಿಪಿಡ್ ಪ್ರೊಫೈಲ್ಗಳು ಅಥವಾ ಅನುವಂಶಿಕ ದೌರ್ಬಲ್ಯಗಳು ವರ್ಷಗಳವರೆಗೆ ಪತ್ತೆಯಾಗದೇ ಉಳಿಯಬಹುದು.”
ಅಥ್ಲೀಟ್ನ ದೇಹದಲ್ಲಿ ಅಡಗಿರುವ ಅಪಾಯ
ವಾರದ ಬಹುತೇಕ ದಿನಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಠಿಣ ವ್ಯಾಯಾಮ ಮಾಡುವ ಕ್ರೀಡಾಪಟುಗಳ ಹೃದಯದಲ್ಲಿ ಕೆಲವೊಮ್ಮೆ ರಚನಾತ್ಮಕ ಬದಲಾವಣೆಗಳು ಕಾಣಿಸಬಹುದು. ಬಹಳಷ್ಟು ಸಂದರ್ಭಗಳಲ್ಲಿ ಈ ಬದಲಾವಣೆಗಳು ಹೊರಗೆ ಗೋಚರಿಸುವುದಿಲ್ಲ. ಕೆಲವು ಕ್ರೀಡಾಪಟುಗಳಲ್ಲಿ ಹೃದಯದ ಸ್ನಾಯು ದಪ್ಪವಾಗುವುದು ಮತ್ತು ಎಡ ಕುಹರ ಅಗಲವಾಗುವುದು ಕಂಡುಬರುತ್ತದೆ.
ಈ ಬದಲಾವಣೆಗಳು ಯಾವಾಗಲೂ ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ. ಆದರೆ ರೋಗನಿರ್ಣಯವಾಗದ ಗುಪ್ತ ಅನುವಂಶಿಕ ಪರಿಸ್ಥಿತಿ ಅಪಾಯಕಾರಿ ಅಂಶವಾಗಿರಬಹುದು. ಕೆಲವೊಮ್ಮೆ ವೈರಲ್ ಸೋಂಕು ಹೃದಯದಲ್ಲಿ ಉರಿಯೂತ ಉಂಟುಮಾಡಬಹುದು. ಹೃದಯದಲ್ಲಿ ಉರಿಯೂತವಿರುವಾಗ ತೀವ್ರ ದೈಹಿಕ ಚಟುವಟಿಕೆಯಿಂದ ಹೃದಯದ ಎಲೆಕ್ಟ್ರಿಕ್ ಇಂಪಲ್ಸ್ಗಳು ಅಸ್ತವ್ಯಸ್ತಗೊಂಡು ಅಸಹಜ ಹೃದಯ ಬಡಿತ ಅಥವಾ ಹಠಾತ್ ಹೃದಯ ಸ್ತಂಭನವನ್ನು ಪ್ರಚೋದಿಸಬಹುದು.
ವೈದ್ಯರ ಪ್ರಕಾರ, “35 ವರ್ಷ ಮೀರಿದ ಕ್ರೀಡಾಪಟುಗಳಿಗೆ ಸೌಮ್ಯ ಮಟ್ಟದ ಬ್ಲಾಕೇಜ್ಗಳು ಅಥವಾ ಪ್ಲೇಕ್ಗಳು ಇರಬಹುದು. ಆಟದ ಸಂದರ್ಭ ಹೃದಯರಕ್ತನಾಳಗಳ ಮೇಲೆ ಒತ್ತಡ ಬಿದ್ದಾಗ ರಕ್ತದೊತ್ತಡ ಏರಬಹುದು. ಆಗ ಸಣ್ಣ ಪ್ಲೇಕ್ಗಳ ಒಂದು ಭಾಗ ಛಿದ್ರವಾಗಬಹುದು. ಮೊದಲಿಗೆ ಅದು ಗಮನಿಸದ ಮಟ್ಟದ ಬ್ಲಾಕೇಜ್ ಉಂಟುಮಾಡಬಹುದು. ಆದರೆ ದೇಹವು ಹೆಪ್ಪುಗಟ್ಟುವಿಕೆ ರೂಪಿಸುವ ಮೂಲಕ ಪ್ರತಿಕ್ರಿಯಿಸಿದಾಗ ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆ ಹಠಾತ್ ಕಡಿಮೆಯಾಗುತ್ತದೆ. ಪರಿಣಾಮವಾಗಿ ಹೃದಯಾಘಾತ ಸಂಭವಿಸಬಹುದು.”
ಇಂತಹ ವ್ಯಕ್ತಿಗಳಲ್ಲಿ ಎಚ್ಚರಿಕೆಯ ಲಕ್ಷಣಗಳು ಕಾಣಿಸದೇ ಇರಬಹುದು. ಕೆಲವೊಮ್ಮೆ ವೇಗದ ಹೃದಯ ಬಡಿತ, ತಲೆತಿರುಗುವಿಕೆ ಅಥವಾ ವಿವರಿಸಲಾಗದ ಆಯಾಸ ಕಂಡುಬರಬಹುದು. ಆದರೆ ಅವುಗಳನ್ನು ಒತ್ತಡ ಅಥವಾ ಬಳಲಿಕೆ ಎಂದು ನಿರ್ಲಕ್ಷಿಸಲಾಗುತ್ತದೆ. ಕೆಲವರಿಗೆ ಯಾವುದೇ ಲಕ್ಷಣಗಳೇ ಇರುವುದಿಲ್ಲ.
ಸಕ್ರಿಯ ಜೀವನದ ಬಳಿಕ ಜಡತೆ
ಕೆಲವರು ಒಂದೆರಡು ಗಂಟೆ ತೀವ್ರವಾಗಿ ವ್ಯಾಯಾಮ ಮಾಡಿದರೂ ಉಳಿದ ಸಮಯದಲ್ಲಿ ಸಂಪೂರ್ಣ ಜಡ ಜೀವನ ನಡೆಸುತ್ತಾರೆ. ಬೆಳಗಿನ ಓಟ ಅಥವಾ ಸಂಜೆ ಜಿಮ್ ವ್ಯಾಯಾಮದಿಂದ 10ರಿಂದ 12 ಗಂಟೆಗಳ ದೀರ್ಘಕಾಲದ ಕುಳಿತುಕೊಳ್ಳುವಿಕೆ, ಅನಿಯಮಿತ ಆಹಾರ ಮತ್ತು ನಿರಂತರ ಮಾನಸಿಕ ಒತ್ತಡವನ್ನು ಸಂಪೂರ್ಣವಾಗಿ ಸರಿದೂಗಿಸಲಾಗುವುದಿಲ್ಲ. ದೇಹವು ಈ ಎಲ್ಲ ಅಂಶಗಳನ್ನು ಒಟ್ಟಾಗಿ ಅನುಭವಿಸುತ್ತದೆ.
ಸರಿಯಾದ ಹೈಡ್ರೇಶನ್ ಇಲ್ಲದಿರುವುದು, ಸಮರ್ಪಕ ವಿಶ್ರಾಂತಿ ಪಡೆಯದಿರುವುದು ಹಾಗೂ ನಿದ್ರೆಯ ಕೊರತೆಯ ನಡುವೆಯೇ ಭಾರೀ ವ್ಯಾಯಾಮಕ್ಕೆ ಇಳಿಯುವುದರಿಂದ ಅಪಾಯ ಹೆಚ್ಚಾಗಬಹುದು.
ಡಿಹೈಡ್ರೇಶನ್ನ ಅಪಾಯ
ಡಿಹೈಡ್ರೇಶನ್ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ದೇಹವು ದ್ರವ ಕಳೆದುಕೊಂಡಾಗ ಒಟ್ಟು ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ರಕ್ತವು ಹೆಚ್ಚು ದಪ್ಪ ಮತ್ತು ಸ್ನಿಗ್ಧ (viscous) ಆಗುತ್ತದೆ. ಪರಿಣಾಮವಾಗಿ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಹೆಚ್ಚುತ್ತದೆ.
ರಕ್ತದೊತ್ತಡ ಮತ್ತು ಆಮ್ಲಜನಕ ಪೂರೈಕೆಯನ್ನು ಕಾಪಾಡಿಕೊಳ್ಳಲು ಹೃದಯವು ಹೆಚ್ಚು ವೇಗವಾಗಿ ಮತ್ತು ಹೆಚ್ಚು ಶ್ರಮಪಟ್ಟು ಪಂಪ್ ಮಾಡಬೇಕಾಗುತ್ತದೆ. ಇದರಿಂದ ಹೃದಯ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.
ಇದೇ ವೇಳೆ ಡಿಹೈಡ್ರೇಶನ್ ಸೋಡಿಯಂ ಮತ್ತು ಪೊಟ್ಯಾಶಿಯಂ ಸೇರಿದಂತೆ ಹೃದಯದ ವಿದ್ಯುತ್ ಚಟುವಟಿಕೆಯನ್ನು ನಿಯಂತ್ರಿಸುವ ಪ್ರಮುಖ ಎಲೆಕ್ಟ್ರೊಲೈಟ್ಗಳ ಸಮತೋಲನಕ್ಕೂ ಧಕ್ಕೆ ಉಂಟುಮಾಡಬಹುದು. ಇದರಿಂದ ಹೃದಯದ ವೇಗದ ಬಡಿತ ಅಥವಾ ಅಪಾಯಕಾರಿ ಅರೆಥ್ಮಿಯಾ ಉಂಟಾಗುವ ಸಾಧ್ಯತೆ ಇರುತ್ತದೆ. ದೇಹವು ದ್ರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಾಗ ರಕ್ತನಾಳಗಳು ಸಂಕುಚಿತಗೊಂಡು ರಕ್ತದೊತ್ತಡ ಹೆಚ್ಚಾಗಬಹುದು. ದಪ್ಪ ರಕ್ತ ಮತ್ತು ಕಿರಿದಾದ ರಕ್ತನಾಳಗಳ ಪರಿಸ್ಥಿತಿಯಲ್ಲಿ ತೀವ್ರ ದೈಹಿಕ ಚಟುವಟಿಕೆಯ ವೇಳೆ ಕೊರೊನರಿ ಬ್ಲಾಕೇಜ್ ಅಪಾಯವೂ ಹೆಚ್ಚಾಗಬಹುದು.
ತಡೆಗಟ್ಟುವ ತಪಾಸಣೆ ಏಕೆ ಅಗತ್ಯ?
ಸಾಮಾನ್ಯ ದೈಹಿಕ ಮತ್ತು ಶ್ವಾಸಕೋಶ ಪರೀಕ್ಷೆಗಳು ಗುಪ್ತ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚದೇ ಇರಬಹುದು. ಆದ್ದರಿಂದ ಕ್ರೀಡಾ ಹೃದ್ರೋಗ ತಜ್ಞರು ಅಥ್ಲೀಟ್ಗಳು ಮತ್ತು ಹೆಚ್ಚು ಸಕ್ರಿಯ ವ್ಯಕ್ತಿಗಳಿಗಾಗಿ ವಿಶೇಷ ಹೃದಯರಕ್ತನಾಳ ತಪಾಸಣೆಗೆ ಒತ್ತು ನೀಡುತ್ತಾರೆ.
12-ಲೀಡ್ ಇಸಿಜಿ (12-lead ECG) ಹೃದಯದ ವಿದ್ಯುತ್ ಚಟುವಟಿಕೆಯನ್ನು ದಾಖಲಿಸುತ್ತದೆ. ಅಸಹಜ ಹೃದಯ ಲಯಗಳು, ಅನುವಂಶಿಕ ವಿದ್ಯುತ್ ಅಸ್ವಸ್ಥತೆಗಳು ಮತ್ತು ರಚನಾತ್ಮಕ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಇದರಿಂದ ಗುರುತಿಸಬಹುದು.
ಎಕೋಕಾರ್ಡಿಯೋಗ್ರಾಮ್ ಅಥವಾ ಹೃದಯದ ಅಲ್ಟ್ರಾಸೌಂಡ್ ಸ್ಕ್ಯಾನ್ ಹೃದಯದ ವಿವರವಾದ ಚಿತ್ರಣ ನೀಡುತ್ತದೆ. ಕ್ಯಾಲ್ಸಿಯಂ ಸ್ಕೋರಿಂಗ್ ವಿಧಾನವು ಆರ್ಟರಿಗಳಲ್ಲಿನ ಪ್ಲೇಕ್ಗಳನ್ನು ಅಳೆಯಲು ನೆರವಾಗುತ್ತದೆ. ಕೆಲವು ವೈದ್ಯರು ಕಾರ್ಡಿಯಾಕ್ ಎಂಆರ್ಐ ಪರೀಕ್ಷೆಯನ್ನೂ ಶಿಫಾರಸು ಮಾಡುತ್ತಾರೆ.
ಅಥ್ಲೀಟ್ಗಳು ‘ವ್ಯಾಯಾಮ ಒತ್ತಡ ಪರೀಕ್ಷೆ’ಗೂ ಒಳಗಾಗಬಹುದು. ಕೆಲವು ಹೃದ್ರೋಗ ತಜ್ಞರು ಹೋಲ್ಟರ್ ಅಥವಾ ಇವೆಂಟ್ ಮಾನಿಟರ್ಗಳ ಮೂಲಕ ಅಂಬ್ಯುಲೇಟರಿ ಇಸಿಜಿ ಮಾನಿಟರಿಂಗ್ ಬಳಸುತ್ತಾರೆ. ಹೃದಯದ ವಿಚಾರದಲ್ಲಿ ತಡೆಗಟ್ಟುವ ತಪಾಸಣೆಗೆ ಆದ್ಯತೆ ನೀಡುವುದು ಅಗತ್ಯ.
ಸೂಚನೆ: ಈ ಮಾಹಿತಿಯನ್ನು ವಿವಿಧ ಮಾಧ್ಯಮ ವರದಿಗಳ ಆಧಾರದ ಮೇಲೆ ಸಂಗ್ರಹಿಸಿ ಪ್ರಕಟಿಸಲಾಗಿದೆ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ.






